ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪುರಸಭೆಯ ಪೌರಕಾರ್ಮಿಕ ಪಾಂಡುರಂಗಯ್ಯ ಸಚಿವ ಜೆ.ಸಿ.ಮಾಧುಸ್ವಾಮಿ ಎದುರು ಚಹ ಕುಡಿದರೆಂಬ ನೆಪವೊಡ್ಡಿ ಪಾಂಡುರಂಗಯ್ಯಗೆ ಐದು ತಿಂಗಳಿಂದ ಕೆಲಸವನ್ನೂ ನೀಡದೆ, ವೇತನವನ್ನೂ ಕೊಡದೆ ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೊವಿಡ್ ಎರಡನೆ ಅಲೆಯಲ್ಲಿ ಚಿಕ್ಕನಾಯಕನಹಳ್ಳಿಯ ಪ್ರವಾಸಿ ಮಂದಿರ ಪಕ್ಕದ ಮನೆಯೊಂದನ್ನು ಸ್ಯಾನಿಟೈಸ್ ಮಾಡಲು ಪೌರಕಾರ್ಮಿಕ ಪಾಂಡುರಂಗಯ್ಯ ಸೇರಿ ಇತರರಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಯಾನಿಟೈಸ್ ಮಾಡಲು ಆ ಮನೆಯ ಬಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯರು ಬೀಗ ಹಾಕಿಕೊಂಡು ಹೊರಗೆ ಹೋಗಿದ್ದರು ಎನ್ನಲಾಗಿದೆ.
ಹೀಗಾಗಿ ಪೌರಕಾರ್ಮಿಕ ಪಾಂಡುರಂಗಯ್ಯ ಸೇರಿ ಇತರೆ ಪೌರಕಾರ್ಮಿಕರಿಗೆ ಬಿಜೆಪಿಯ ಬೆಂಬಲಿಗರೊಬ್ಬರು ಚಹ ಕೊಡಿಸಿದ್ದಾರೆ. ಎಲ್ಲರೂ ಚಹವನ್ನು ಕುಡಿಯುತ್ತಿದ್ದಾಗ ದಿಢೀರನೆ ಅಲ್ಲಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಬಂದು, ‘ಏನ್ರೋ ಇನ್ನೂ ಸ್ಯಾನಿಟೈಸ್ ಮಾಡಿಲ್ಲ, ಏನ್ ಮಾಡ್ತಾ ಇದ್ದೀರಾ ಎಂದು ಗದರಿದರು ಎಂದು ಹೇಳಲಾಗಿದೆ.
ಸಚಿವರು ಬಂದದ್ದನ್ನು ನೋಡಿ ಚಹ ಕುಡಿಯುವುದನ್ನೇ ಬಿಟ್ಟು ನಿಂತುಕೊಂಡ ಪೌರಕಾರ್ಮಿಕರು ಸಚಿವರು ಏನು ಹೇಳುತ್ತಾರೋ ಎಂದು ಭಯಭೀತರಾಗಿದ್ದಾರೆ. ಆಗ ಸಚಿವರು ಪಾಂಡುರಂಗಯ್ಯ ಅವರಿಗೆ ಮನ ಬಂದಂತೆ ನಿಂದಿಸಿದ್ದಲ್ಲದೆ, ಪೌರಕಾರ್ಮಿಕ ಪಾಂಡುರಂಗಯ್ಯನಿಗೆ ಕೆಲಸವನ್ನು ನೀಡಬೇಡಿ, ವೇತನವನ್ನು ಪಾವತಿಸಬೇಡಿ ಎಂದು ಮೌಖಿಕ ಆದೇಶ ನೀಡಿ ಅಲ್ಲಿಂದ ತೆರಳಿದರು ಎನ್ನಲಾಗಿದೆ.
ಇದರಿಂದ ವಿಚಲಿತರಾದ ಪಾಂಡುರಂಗಯ್ಯ ಅಧಿಕಾರಿಗಳಿಗೆ ನನ್ನನ್ನು ಕೆಲಸದಿಂದ ತೆಗೆಯಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೆಂದು ನಂತರ ಸಫಾಯಿ ಕರ್ಮಾಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್ ಚಿಕ್ಕನಾಯಕನಹಳ್ಳಿಗೆ ಭೇಟಿ ನೀಡಿ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಮಾಡಿಕೊಂಡು ಪಾಂಡುರಂಗಯ್ಯ ಅವರನ್ನು ಕೆಲಸಕ್ಕೆ ತೆಗೆದುಕೊಂಡು ವೇತನ ನೀಡುವಂತೆ ಮನವಿ ಮಾಡಿದ್ದಾರೆ.
‘ಸಚಿವರ ಮೌಖಿಕ ಸೂಚನೆಯ ಮೇರೆಗೆ ಕಳೆದ 5 ತಿಂಗಳಿಂದಲೂ ಪಾಂಡುರಂಗಯ್ಯ ಅವರಿಗೆ ವೇತನವನ್ನೂ ನೀಡಿಲ್ಲ. ಕೆಲಸವನ್ನೂ ಕೊಟ್ಟಿಲ್ಲ. ನಾನು ಸಚಿವರಿಗೆ ಮನವಿ ಮಾಡಿದೆ. ಕೆಲಸ ಕೊಡದಿದ್ದರೆ ನೋಟಿಸ್ ಆದರೂ ನೀಡಿ ಮುಂದಿನ ದಾರಿ ನೋಡಿಕೊಳ್ಳುತ್ತೇವೆ ಎಂದು ಮನವಿ ಮಾಡಿದರೂ ಸಚಿವರು ನನ್ನ ಮನವಿಗೆ ಸ್ಪಂದಿಸಲಿಲ್ಲ’ ಎಂದು ಕೆ.ಬಿ.ಓಬಳೇಶ್ ದಿ ನ್ಯೂಸ್ ಕಿಟ್.ಇನ್ ಜೊತೆ ಮಾಹಿತಿ ಹಂಚಿಕೊಂಡರು.
ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2018ರಲ್ಲಿ ನೇರಪಾವತಿಗೆ ಆಯ್ಕೆ ಮಾಡಿ ಉತ್ತಮ ಕಾರ್ಮಿಕರೆಂದು ಪುರಸಭೆ ಅಧಿಕಾರಿಗಳು ಒಪ್ಪಿಕೊಂಡು ಮೇಲ್ವಿಚಾರಕರಾಗಿ ನೇಮಿಸಿಕೊಂಡಿದ್ದಾರೆ. ಇಂತಹ ಪ್ರಾಮಾಣಿಕ ಪೌರಕಾರ್ಮಿಕನನ್ನು ಕ್ಷುಲ್ಲಕ ಕಾರಣಕ್ಕೆ ಕೆಲಸ ನೀಡದೆ, ವೇತವನ್ನೂ ನೀಡದೆ ಕಿರುಕುಳ ಕೊಡಲಾಗುತ್ತಿದೆ. ಪಾಂಡುರಂಗಯ್ಯ ಅವರ ಕುಟುಂಬ ಬೀದಿಗೆ ಬರುವಂತಾಗಿದೆ ಎಂದು ದೂರಿದರು.
15 ವರ್ಷಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿರುವ ಪೌರಕಾರ್ಮಿಕನಿಗೆ ಯಾವುದೇ ನೋಟೀಸ್ ನೀಡದೆ ಕಾರಣವೂ ತಿಳಿಸದೆ ಅನಧಿಕೃತವಾಗಿ ಕೆಲಸಕ್ಕೆ ಬೇಡ ೆಂದು ಮೌಖಿಕವಾಗಿ ತಿಳಿಸಿರುವುದು ಪರಿಶಿಷ್ಟ ಜಾತಿ ನೌಕರರಿಗೆ ಮಾಡುವ ವಂಚನೆ, ದೌರ್ಜನ್ಯವಾಗಿದೆ. ಹೀಗಾಗಿ ಕೂಡಲೇ ಮುಖ್ಯಾಧಿಕಾರಿಗಳೊಂದಿಎ ಚರ್ಚಿಸಿ ತಕ್ಷಣ ಕೆಲಸಕ್ಕೆ ನೇಮಿಸಿಕೊಳ್ಳಲು ಸೂಚಿಸಬೇಕು. 5 ತಿಂಗಳ ವೇತನ ಕೂಡಲೇ ಪಾವತಿಸಲು ನಿರ್ದೇಶನ ನೀಡಬೇಕು ಎಂದು ಕೆ.ಬಿ.ಓಬಳೇಶ್ ಸಫಾಯಿ ಕರ್ಮಾಚಾರಿಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.