ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಪಕ್ಷಕ್ಕಾಗುವ ಮುಜುಗರವನ್ನು ತಪ್ಪಿಸುವ ಉದ್ದೇಶದಿಂದ ಪಕ್ಷ ಕಾರ್ಯಕಾರಿಣಿ ಸಭೆ ಮುನ್ನ ಅಂದರೆ ಶುಕ್ರವಾರ ಸಂಜೆ ರಾಜಿನಾಮೆ ನೀಡುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ನನಗೆ ಮುಖ್ಯಮಂತ್ರಿಯಿಂದಾಗಲಿ ಮತ್ತು ಕೇಂದ್ರದ ಹೈಕಮಾಂಡ್ ನಾಯಕರಿಂದಾಗಲೀ ರಾಜಿನಾಮೆ ನೀಡುವಂತೆ ಒತ್ತಡ ಬಂದಿಲ್ಲ. ಪಕ್ಷಕ್ಕೆ ಆಗುವ ಮುಜುಗರವನ್ನು ತಪ್ಪಿಸಲು ನಾನೇ ಸ್ವಯಂ ಪ್ರೇರಿತವಾಗಿ ರಾಜಿನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಯಾವುದೇ ಕಾರಣಕ್ಕೂ ರಾಜಿನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದ ಕೆ.ಎಸ್.ಈಶ್ವರಪ್ಪ ಈಗ ಉಲ್ಟಾ ಹೊಡೆದಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕಾರಣರಾಗಿದ್ದು, ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ತೀವ್ರ ಒತ್ತಡ ಹೇರಿದ್ದವು. ಈಶ್ವರಪ್ಪ ಅವರನ್ನು ಬಂಧಿಸುವಂತೆ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಮತ್ತು ಪಕ್ಷದ ಹೈಕಮಾಂಡ್ ನಾಯಕರು ಒತ್ತಡದಿಂದಾಗಿ ಈಶ್ವರಪ್ಪ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಂದು ಬೆಳಗ್ಗೆ ಕೆ.ಎಸ್.ಈಶ್ವರಪ್ಪ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ದೂರವಾಣಿ ಕರೆ ಮಾಡಿ ರಾಜಿನಾಮೆ ನೀಡುವಂತೆ ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ. ಪ್ರತಿಪಕ್ಷಗಳು ಮತ್ತು ಪಕ್ಷದ ಹೈಕಮಾಂಡ್ ಗೆ ಮಣಿದಿರುವ ಈಶ್ವರಪ್ಪ ಕೊನೆಗೂ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಿ ಸಚಿವ ಈಶ್ವರಪ್ಪ ರಾಜಿನಾಮೆ ನೀಡಿದರೆ ಸಾಲದು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಐಪಿಸಿ ಸೆಕ್ಷನ್ 34 ಮತ್ತು 306ರ ಅಡಿ ಕೇಸು ದಾಖಲಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸು ದಾಖಲಿಸಿ ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವ ಈಶ್ವರಪ್ಪ ಬಂಧನ ಆಗುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಈಶ್ವರಪ್ಪ ರಾಜಿನಾಮೆ ಮುಖ್ಯವಲ್ಲ. ಅವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಬಂಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.


