ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಚೋದನೆ ನೀಡಿದ ಸಚಿವ ಈಶ್ವರಪ್ಪ ವಿರುದ್ಧ ಐಪಿಸಿ 306 ಸೆಕ್ಷನ್ ಅಡಿ ಕೇಸು ದಾಖಲಿಸಿ, ಸಂಪುಟದಿಂದ ವಜಾಗೊಳಿಸಬೇಕು. ಇದು ಗಂಭೀರ ಪ್ರಕರಣವಾಗಿರುವುದರಿಂದ ಕೂಡಲೇ ಅವರನ್ನು ಬಂಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರ ನಿಯೋಗ ಈಶ್ವರಪ್ಪ ವಿರುದ್ಧ ಕ್ರಮ ಜರುಗಿಸಬೇಕು. ಇದೆಲ್ಲವನ್ನೂ ರಾಜ್ಯಪಾಲರು ಮಾಡುತ್ತಾರೆ ಎಂಬ ವಿಶ್ವಾಸವಿದೆ. ಮುಖ್ಯಮಂತ್ರಿಗಳ ಬಳಿ ಮಾತನಾಡುತ್ತೇನೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕಾನೂನಿಗಿಂತ ಈಶ್ವರಪ್ಪ ದೊಡ್ಡವರ? ಕಾನೂನಿನ ಪ್ರಕಾರ ಕೈಗೊಳ್ಳಬೇಕಾದ ಕ್ರಮವನ್ನು ಕೈಗೊಳ್ಳಲೇಬೇಕು. ಅದು ಯಾರಾದರೂ ಒಂದೆ ಎಂದರು. ಈ ಸರ್ಕಾರಕ್ಕೆ ಮಾನ ಮರ್ಯಾದಿ ಇದ್ದರೆ ರಾಜ್ಯದ ಜನರ ಪ್ರಾಣ ಕಾಪಾಡಬೇಕು ಎಂಬ ಜವಾಬ್ದಾರಿ ಇದ್ದರೆ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಬೇಕು. ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಕೆ.ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಗುತ್ತಿಗೆದಾರ ಸಂತೋಷ್ ಪಾಟೀಲ್ ಗೆ ಹಳ್ಳಿ ರಸ್ತೆಗಳನ್ನು ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಇದೆಲ್ಲವೂ 4 ಕೋಟಿ ವೆಚ್ಚದ 108 ಕಾಮಗಾರಿಗಳು. ಇವೆಲ್ಲವನ್ನೂ ಖಾಸಗಿಯವರ ಬಳಿ ಸಾಲ ಮಾಡಿ, ಹೆಂಡತಿ ಒಡವೆಗಳನ್ನು ಅಡವಿಟ್ಟು ಸಾಲು ತಂದು ಗುಣಮಟ್ಟದ ಕೆಲಸ ಮಾಡಿ ಮುಗಿಸಿದ್ದಾರೆ ಎಂದು ರಾಜ್ಯಪಾಲರಿಗೆ ನೀಡಿದ ಪತ್ರದಲ್ಲಿ ಹೇಳಲಾಗಿದೆ.
ಒಬ್ಬ ಸಚಿವರಾಗಿ ತಾವೇ ಹೇಳಿ ಮಾಡಿಸಿದ ಕಾಮಗಾರಿಗಳ ವರ್ಕ್ ಆರ್ಡರ್ ಮತ್ತು ಬಿಲ್ ಪಾವತಿ ಮಾಡಲು 40ರಷ್ಟು ಕಮಿಷನ್ ಕೇಳಿದ್ದಾರೆ. ಆತನಿಗೆ ಬಿಲ್ ಹಣ ಪಡೆಯಲು ಬೆಂಗಳೂರಿಗೆ ತಿರುಗಿ ಸಾಕಾಗಿದೆ. ಹಲವಾರು ಬಾರಿ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಪ್ರಧಾನಿ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿರುವುದನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರ್ಕಾರ 40ರಷ್ಟು ಕಮಿಷನ್ ಸರ್ಕಾರ, ಕಮಿಷನ್ ಗಾಗಿ ಕಿರುಕುಳ ನೀಡುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿರುವುದು, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹೀಗೆ ಎಲ್ಲಾ ಇಲಾಖೆಗಳಲ್ಲಿ 40ರಷ್ಟು ಕಮಿಷನ್ ಕೊಡದ ಯಾವ ಕೆಲಸಗಳು ಆಗಲ್ಲ. ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಮುಂದಾದಾಗ ಸಭಾಧ್ಯಕ್ಷರು ನನಗೆ ಮಾತನಾಡಲು ಅವಕಾಶ ನೀಡದೆ ಸ್ವಯಂಪ್ರೇರಿತರಾಗಿ ನನ್ನ ಮನವಿಯನ್ನು ತಿರಸ್ಕರಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


