ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದ್ದು, ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯ ಕುರಿತು ತನಿಖೆ ಆಗಬೇಕು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಪ್ರಕರಣದ ತನಿಖೆ ನಡೆಯದೆ ರಾಜಿನಾಮೆ ನೀಡುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ನಾಯಕರು ನನ್ನ ಬಳಿ ಮಾತನಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹೈಕಮಾಂಡ್ ನಾಯಕರ ತನಕ ಹೋಗಿಲ್ಲ. ನನ್ನ ವಿರೋಧಿಗಳು ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. ದೆತ್ ನೋಟ್ ಇಲ್ಲ, ವಾಟ್ಸಪ್ ಮಾಡಿದ್ದಾರೆ. ಹೀಗಾಗಿ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಕಾಮಗಾರಿಗಳು ನಡೆಯಬೇಕಾದರೆ ಕೆಲವು ನಿಯಮಗಳಿರುತ್ತವೆ. ಅದನ್ನು ಪಾಲಿಸಿಲ್ಲ. ಹಾಗಾಗಿ ನಾನು ರಾಜಿನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ.
ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. ಷಡ್ಯಂತ್ರ ಯಾರು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ದೆಹಲಿಗೆ ಹೋಗಲು ಪ್ಲೈಟ್ ಬುಕ್ ಮಾಡಿಕೊಟ್ಟವರ್ಯಾರು ಎಂಬುದೂ ಕೂಡ ತನಿಖೆ ಆಗಬೇಕು ಎಂದು ಆಗ್ರಹಿಸಿದರು.


