ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಐಪಿಸಿ 306 ಸೆಕ್ಷನ್ ಅಡಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ನೀಡಿದ ದೂರಿನ ಮೇರೆಗೆ ಉಡುಪಿ ಪೊಲೀಸರು ಈಶ್ವರಪ್ಪ ಸೇರಿದಂತೆ ಅವರ ಆಪ್ತರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಸಚಿವ ಈಶ್ವರಪ್ಪ 40ರಷ್ಟು ಕಮಿಷನ್ ಗೆ ಪೀಡಿಸುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಪತ್ರ ಬರೆದಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ನಂತರ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಶವವಾಗಿ ಪತ್ತೆಯಾಗಿರುವುದು ಮತ್ತು ಮೊಬೈಲ್ ನಲ್ಲಿ ಡೆತ್ ನೋಟಿನಲ್ಲಿ ನನ್ನ ಸಾವಿಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಹೀಗಾಗಿ ಪ್ರಶಾಂತ್ ಪಾಟೀಲ್ ನೀಡಿರುವ ದೂರಿನ ಮೇರೆಗೆ ಮೊದಲ ಆರೋಪಿಯಾಗಿ ಕೆ.ಎಸ್.ಈಶ್ವರಪ್ಪ, ಎರಡನೇ ಆರೋಪಿಯಾಗಿ ಬಸವರಾಜ ಮತ್ತು ಮೂರನೇ ಆರೋಪಿಯಾಗಿ ರಮೇಶ್ ಸೇರಿ ಇತರರನ್ನು ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತಾವು ಕೈಗೊಂಡಿರುವ 4 ಕೋಟಿ ರೂಗಳ ಕಾಮಗಾರಿಯಲ್ಲಿ 40ರಷ್ಟು ಕಮಿಷನ್ ನೀಡುವಂತೆ ಸಚಿವರ ಆಪ್ತರು ಒತ್ತಾಯಿಸಿದ್ದಾರೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.


