ಬುಧವಾರವೂ ಇಂಧನ ಬೆಲೆಯಲ್ಲಿ ಲೀಟರ್ ಗೆ 80 ಪೈಸೆ ಏರಿಕೆಯಾಗಿದೆ. ಕಳೆದ 16 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 14 ಬಾರಿ ಹೆಚ್ಚಳವಾಗಿದ್ದು ಪ್ರತಿ ಲೀಟರ್ ಗೆ 10 ರೂ ಹೆಚ್ಚಾಗಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105 ರೂಗೆ ಏರಿಕೆಯಾಗಿದ್ದರೆ ಮುಂಬೈನಲ್ಲಿ 120 ರೂಗೆ ಹೆಚ್ಚಳ ಕಂಡಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳದ ನಂತರ 120.51ರೂ, ಡೀಸೆಲ್ ಪ್ರತಿ ಲೀಟರ್ ಗೆ 85 ಪೈಸೆ ಏರಿಕೆ ಆಗಿ 104.77 ರೂಗೆ ಮಾರಾಟವಾಗುತ್ತಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತವು ಕೇವಲ ಶೇ.5ರಷ್ಟು ಬದಲಾವಣೆಯನ್ನು ಕಂಡಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ತೀವ್ರ ಜಿಗಿತ ಕಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಇತರ ವಸ್ತುಗಳ ಬೆಲೆಗಳ ಮೇಲೆ ಕ್ಯಾಸ್ಕೇಡಿಂಗ್ ಪರಿಣಾಮವನ್ನು ಬೀರುತ್ತದೆ. ಹಣದುಬ್ಬರದ ಒತ್ತಡಕ್ಕೆ ಕಾರಣವಾಗುತ್ತದೆ. ಇತರ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರುವ ಬೆಳವಣಿಗೆಗೆ ಹಾನಿ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಶೇಷವೆಂದರೆ ಕಳೆದ ವರ್ಷ ನವೆಂಬರ್ 3ರಂದು ಕೇಂದ್ರ ಸರ್ಕಾರ ದೇಶಾದ್ಯಂತ ಚಿಲ್ಲರೆ ಬೆಲೆಗಳನ್ನು ತಗ್ಗಿಸಲು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10ರೂಪಾಯಿಗಳಷ್ಟು ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ನಂತರ ಜನರಿಗೆ ಪರಿಹಾರ ನೀಡಲು ಹಲವಾರು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಿದ್ದವು.