Saturday, October 19, 2024
Google search engine
Homeಮುಖಪುಟಬಾಬೂಜಿ ಪುತ್ರಿ ಮೀರಾ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದಾಗ ಬಿಜೆಪಿ ಅಭ್ಯರ್ಥಿ ನಿಲ್ಲಿಸಿದ್ದೇಕೆ- ಸಿದ್ದರಾಮಯ್ಯ ಪ್ರಶ್ನೆ

ಬಾಬೂಜಿ ಪುತ್ರಿ ಮೀರಾ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದಾಗ ಬಿಜೆಪಿ ಅಭ್ಯರ್ಥಿ ನಿಲ್ಲಿಸಿದ್ದೇಕೆ- ಸಿದ್ದರಾಮಯ್ಯ ಪ್ರಶ್ನೆ

ಬಾಬು ಜಗಜೀವನ್ ರಾಮ್ ಜಯಂತಿ ದಿನದ ನನ್ನ ಭಾಷಣದ ವರದಿಯನ್ನು ಪತ್ರಿಕೆಗಳಲ್ಲಿ ಓದಿದ ಮಾಜಿ ಶಿಕ್ಷಣ ಸಚಿವ Suresh Kumar S ನನಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.ಹೌದು, ಜಗಜೀವನ್ ರಾಮ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು, ನಂತರ ಬಿಟ್ಟು ಹೋಗಿ ಸ್ವಂತ ಪಕ್ಷ ಕಟ್ಟಿರುವುದು ಎಲ್ಲರಂತೆ ನನಗೂ ಗೊತ್ತಿದೆ.

ಬಾಬೂಜಿ ಅವರ ಮಗಳು ಮೀರಾ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿಯೇ ನಾಲ್ಕು ಬಾರಿ ಸಂಸದರಾಗಿರುವುದು ನನಗೂ ಗೊತ್ತು. ಮೀರಾ ಕುಮಾರ್ ಅವರನ್ನು ಕಳೆದ ಬಾರಿ ಕಾಂಗ್ರೆಸ್ ಪಕ್ಷ ರಾಷ್ಟ್ರಪತಿ ಅಭ್ಯರ್ಥಿ ಮಾಡಿದಾಗ ಅವರ ವಿರುದ್ದ ಅಭ್ಯರ್ಥಿ ನಿಲ್ಲಿಸಿದ್ದು ಬಾಬೂಜಿ ಬಗ್ಗೆ ಇಷ್ಟೊಂದು ಗೌರವ-ಅಭಿಮಾನ ವ್ಯಕ್ತಪಡಿಸುವ ಸುರೇಶ್ ಕುಮಾರ್ ಅವರ ಪಕ್ಷವೆನ್ನುವುದು ಗೊತ್ತು.

ಬಾಬೂಜಿಯವರು ಹಸಿರು ಕ್ರಾಂತಿಯ ಮೂಲಕ ತೆರೆದಿದ್ದ ರೈತಾಪಿ ಜನರ ಭಾಗ್ಯದ ಬಾಗಿಲನ್ನು Suresh Kumar S ಪಕ್ಷದ ಸರ್ಕಾರ ಹೇಗೆ ಕರಾಳ ಕೃಷಿ ಕಾಯ್ದೆಗಳ ಮೂಲಕ ಮುಚ್ಚಲು ಹೊರಟಿವೆ ಎನ್ನುವುದು ನನಗೆ ಗೊತ್ತು.

ಜನರ ನಿತ್ಯದ ಬವಣೆಗಳಿಗೆ ಸಂಬಂಧಿಸದ ನಿಮ್ಮ ಕುಹಕದ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸುವ ಅಗತ್ಯವಿಲ್ಲ ಎಂದು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತೇನೆ. ಮುಖತ: ಸಿಕ್ಕಾಗ ಪುರುಸೊತ್ತಿನಲ್ಲಿ ಈ ಬಗ್ಗೆ ಮಾತನಾಡೋಣ.

ನಿಮಗೆ ನನ್ನಪ್ರಶ್ನೆ: ಇಂದು ಬೆಳಿಗ್ಗೆ ನೀವು ಎದ್ದು ಪತ್ರಿಕೆ ಓದುವಾಗ ಕಂಡದ್ದು ನನ್ನ ಭಾಷಣ ಮಾತ್ರವೇ? ಉಳಿದ ಯಾವ ಸುದ್ದಿಗಳೂ ನಿಮ್ಮ ಕಣ್ಣಿಗೆ ಬೀಳಲಿಲ್ಲವೇ? ಆ ಸುದ್ದಿಗಳು ನಿಮ್ಮ ಕಣ್ಣುಗಳಿಂದ ತಪ್ಪಿಸಿಕೊಂಡಿದ್ದರೆ, ಅವುಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಆ ಸುದ್ದಿಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ದಯವಿಟ್ಟು ತಿಳಿಸಿ.

ಮೊದಲನೆಯದಾಗಿ, ಎಲ್ಲ ಪತ್ರಿಕೆಗಳು ಪೆಟ್ರೋಲ್, ಡೀಸೆಲ್, ಸಿಎನ್ ಜಿ, ಅಟೋಗ್ಯಾಸ್, ಅಡುಗೆ ಅನಿಲ, ವಾಣಿಜ್ಯಬಳಕೆಯ ಗ್ಯಾಸ್, ಅಡುಗೆ ಅನಿಲ ಮತ್ತು ವಿದ್ಯುತ್ ದರ ಏರಿಕೆ ಬಗ್ಗೆ ವಿವರವಾಗಿ ವರದಿ ಮಾಡಿವೆ.

ಇದರಿಂದಾಗಿ ಒಂದೆಡೆ ಪ್ರತಿ ಕುಟುಂಬದ ತಿಂಗಳ ಬಜೆಟ್ ಏರುಪೇರಾಗಿ ಹೊಟ್ಟೆಗೆ ತಣ್ಣೀರಿನ ಬಟ್ಟೆ ಹಾಕಿಕೊಳ್ಳುವ ದುಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಹೊಟೇಲ್ ಗಳು ತಮ್ಮ ಚಹ-ತಿಂಡಿಯ ಬೆಲೆಯನ್ನು ಏರಿಸಲು ಹೊರಟಿದ್ದಾರೆ. ಕಾರು-ಅಟೋಗಳು ತಮ್ಮ ಸಾರಿಗೆ ದರವನ್ನು ಹೆಚ್ಚಿಸಿವೆ. ಲಾರಿ ಬಾಡಿಗೆ ಹೆಚ್ಚಾಗಿರುವ ಕಾರಣ ತರಕಾರಿ-ಹಣ್ಣುಗಳು ಮತ್ತು ದಿನನಿತ್ಯ ಬಳಕೆಯ ಅಡಿಗೆ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ.

ಬಹುತೇಕ ಪತ್ರಿಕೆಗಳು ಸಾಮಾನ್ಯ ಜನರನ್ನು ಕಷ್ಟಕ್ಕೆ ನೂಕಿರುವ ನಿಮ್ಮ ಸರ್ಕಾರದ ನಿಲುವನ್ನು ಖಂಡಿಸಿವೆ. ಕಟುವಾದ ಸಂಪಾದಕೀಯಗಳನ್ನು ಬರೆದಿವೆ. ಈ ಸುದ್ದಿ-ಸಂಪಾದಕೀಯಗಳನ್ನು ನೀವು ಓದದೆ ಇದ್ದಿದ್ದರೆ ದಯವಿಟ್ಟು ಓದಿ ಪ್ರತಿಕ್ರಿಯಿಸಿ.

ಎರಡನೆಯದಾಗಿ, ನಿಮ್ಮ ಪರಿವಾರದ ಕೂಗುಮಾರಿಗಳು ದಿನಕ್ಕೊಂದರಂತೆ ಎಬ್ಬಿಸುತ್ತಿರುವ ಕೋಮು ಸಂಘರ್ಷದ ವಿವಾದದಿಂದ ಬೇಸತ್ತು ರಾಜ್ಯದ ಉದ್ಯಮಿಗಳು ಕರ್ನಾಟಕವನ್ನು ತೊರೆದು ನೆರೆಯ ರಾಜ್ಯಗಳಿಗೆ ಹೋಗುವ ತಯಾರಿಯಲ್ಲಿರುವ ಬಗ್ಗೆಯೂ ಪತ್ರಿಕೆಗಳು ವರದಿ ಮಾಡಿವೆ. ನಮ್ಮ ಪಕ್ಷದ ಸರ್ಕಾರ ಇರುವಾಗ ರಾಜ್ಯ ತಲೆಗೇರಿಸಿಕೊಂಡ ಕರ್ನಾಟಕದ ಸಿಲಿಕಾನ್ ಸಿಟಿ, ಸ್ಟಾರ್ಟ್ ಅಪ್ ರಾಜಧಾನಿ ಎಂಬೀತ್ಯಾಧಿ ಕೀರ್ತಿ ಕಿರೀಟಗಳು ಉರುಳಿ ಬೀಳುವ ಅಪಾಯ ಎದುರಾಗಿವೆ. ಈ ಬಗ್ಗೆಯೂ ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ.

ಮೂರನೆಯದಾಗಿ, ಉತ್ತರ ಕರ್ನಾಟಕದ ಆರು ಜಿಲ್ಲೆಗಳ 350 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಜನ ಕಂಗಾಲಾಗಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ. ಇದನ್ನು ಮೂಕ ಬಸವಣ್ಣನಂತಾಗಿರುವ ಮುಖ್ಯಮಂತ್ರಿಗಳ ಗಮನಕ್ಕೆ ತಂದು ನೊಂದ ಜನರಿಗೆ ಪರಿಹಾರ ಕಲ್ಪಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸಿ.

ನಾಲ್ಕನೇಯದಾಗಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಹೋರಾಟವನ್ನೇ ಮಾಡಿದ ನಿಮ್ಮ ಸರ್ಕಾರ ಜಾನುವಾರುಗಳ ಖರೀದಿ ಮತ್ತು ಅವುಗಳಿಗೆ ಆಹಾರ ಒದಗಿಸಲು ಒಂದು ಯೋಜನೆಯನ್ನೂ ರೂಪಿಸಿಲ್ಲ. ಹಸುಗಳನ್ನು ಖರೀದಿಸಲು ಕಳೆದ ವರ್ಷ ಒಂದು ಪೈಸೆ ಅನುದಾನವನ್ನೂ ನೀಡಿಲ್ಲ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಖರೀದಿಸಿದ ಬಹುಮತದಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದು ಸಂಭ್ರಮಿಸಿದ ನಿಮಗೆ ಗೋವುಗಳಿಗೆ ನಿಮ್ಮ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಕಂಡು ಮನಸ್ಸು ಬೇಯುವುದಿಲ್ಲವೇ ?

ಐದನೆಯದಾಗಿ, ಬೆಲೆ ಏರಿಕೆಯಿಂದ ಜನರ ಜೇಬು ಖಾಲಿಯಾಗುತ್ತಿದ್ದರೂ ನಿಮ್ಮ ಪಕ್ಷದ ಜೇಬು ಮಾತ್ರ ಭರಪೂರ ತುಂಬುತ್ತಿರುವ ಗುಟ್ಟೇನು ಎನ್ನುವುದನ್ನು ಕೂಡಾ ರಾಜ್ಯದ ಜನರಿಗೆ ತಿಳಿಸಿಬಿಡಿ. 2019-20 ನೇ ಸಾಲಿನಲ್ಲಿ ಕಾರ್ಪೋರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ 921.95 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಅದರಲ್ಲಿ 720 ಕೋಟಿ ರೂಪಾಯಿ ಕೇವಲ ನಿಮ್ಮ ಪಕ್ಷದ ಜೇಬು ಸೇರಿದೆ ಎಂದು ಪತ್ರಿಕೆಯೊಂದು ವರದಿ ಮಾಡಿರುವುದನ್ನು ನೀವು ಗಮನಿಸದೆ ಇದ್ದಿದ್ದರೆ ದಯವಿಟ್ಟು ಓದಿ ಪ್ರತಿಕ್ರಿಯಿಸಿ.

ಕೊನೆಯದಾಗಿ, ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ನಿಮ್ಮ ಪರಿವಾರ ಎಬ್ಬಿಸುತ್ತಿರುವ ಅನಗತ್ಯ ವಿವಾದದ ವಿಷಯಗಳಾಗಿರುವ ಹಿಜಾಬ್, ಭಗವದ್ಗೀತೆ, ಹಲಾಲ್, ಆಜಾನ್ ಬಗ್ಗೆ ನೀವು ಪ್ರತಿಕ್ರಿಯಿಸದೆ ಮೌನವಾಗಿರುವುದು ಆ ವಿಷಯಗಳ ಬಗ್ಗೆ ನಿಮಗಿರುವ ಭಿನ್ನಾಭಿಪ್ರಾಯದಿಂದಾಗಿಯೇ? ಇಲ್ಲವೇ ವಿವಾದದ ಸುಳಿಗೆ ಸಿಗದೆ ಅದರಿಂದಾಗುವ ರಾಜಕೀಯ ಲಾಭವನ್ನಷ್ಟೇ ಪಡೆದು ಉಳಿದಂತೆ ಮೌನವಾಗಿರುವ ಜಾಣತನವೇ?

ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular