ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಯದ್ವಾತದ್ವಾ ಏರಿಕೆ ಮಾಡಿದ್ದು ಯುಗಾದಿ ಹಬ್ಬದಲ್ಲಿ ಜನರಿಗೆ ಬರೀ ಕಹಿಯನ್ನು ನೀಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.
ಈ ರೀತಿ ಬೆಲೆ ಏರಿಕೆ ಮಾಡಿ ರೈತರಿಂದ 3,600 ಕೋಟಿ ರೂಪಾಯಿ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದೆ. ರೈತರ ಹಣವನ್ನು ದುಪ್ಪಟು ಮಾಡುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅದನ್ನು ಮಾಡದೆ ರೈತರ ರಕ್ತ ಕುಡಿಯಲು ಆರಂಭಿಸಿದ್ದಾರೆ. ಕೃಷಿಗೆ ಬಳಸುವ ಕೀಟನಾಶಕಗಳ ಮೇಲೆ ಶೇ.18ರಷ್ಟು ಕೃಷಿ ಯಂತ್ರೋಪಕರಣಗಳ ಮೇಲೆ 12ರಷ್ಟು, ರಸಗೊಬ್ಬರದ ಮೇಲೆ 5ರಷ್ಟು ಜಿಎಸ್.ಟಿ ವಿಧಿಸಲಾಗಿದ್ದು ರೈತರನ್ನು ಸುಲಿಗೆ ಮಾಡುತ್ತ ಅವರ ಬದುಕನ್ನು ಕಸಿಯಲಾಗುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಕಳೆದ ಬಾರಿ ರೈತರು ಹೆಚ್ಚು ರಾಗಿ ಬೆಳೆದಿದ್ದರು. ಈ ಬಾರಿಯೂ 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆದಿದ್ದಾರೆ. ಇದರಲ್ಲಿ ಅರ್ಧದಷ್ಟು ಆದರೂ ಖರೀದಿಮಾಡಿಲ್ಲ. ಕೇವಲ 2.1ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ನಿಗದಿ ಮಾಡಿದ್ದರೂ ಇದುವರೆಗೆ 1.9ಲಕ್ಷ ಮೆಟ್ರಿಕ್ ಟನ್ ಮಾತ್ರ ಖರೀದಿ ಮಾಡಿದೆ. ರೈತರ ಬಗ್ಗೆ ದೊಡ್ಡದೊಡ್ಡ ಭಾಷಣ ಮಾಡುವ ಮೋದಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಕಳೆದ ಎಂಟು ವರ್ಷದಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ ಗೆ ಸರಾಸರಿ 60 ಡಾಲರ್ ಇತ್ತು. ಈಗ 108.25 ಡಾಲರ್ ಆಗಿದೆ. ಕಳೆದ ಎಂಟು ವರ್ಷಗಳಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದಾಗಲೂ ಬೆಲೆ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಗೆ ತಾನು ಕಾರಣವಲ್ಲ ಎಂದು ಹೇಳುವ ಕೇಂದ್ರ ಐದು ರಾಜ್ಯಗಳ ಚುನಾವಣೆಯ ಫಲಿತಾಂಶದವರೆಗೆ ಏಕೆ ಏರಿಕೆ ಮಾಡಲಿಲ್ಲ. ಪೆಟ್ರೋಲ್ ನಿಯಂತ್ರಣ ಯಾರ ಕೈಯಲ್ಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದ ಆಗ್ರಹಿಸಿದರು.
ಹೆಚ್ಚುವರಿ ಅಬಕಾರಿ ಸುಂಕವೊಂದನ್ನೇ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳೆದ ಎಂಟು ವರ್ಷಗಳಲ್ಲಿ 26 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ. ಹಿಂದಿನ ಸರ್ಕಾರಗಳು ಸಾಲ ಮಾಡಿದ್ದನ್ನು ತೀರಿಸಲು ಪೆಟ್ರೋಲ್ ಬೆಲೆ ಹೆಚ್ಚು ಮಾಡಬೇಕಾಯ್ತು ಎಂದು ಹಣಕಾಸು ಸಚಿವರು ಹೇಳುತ್ತಾರೆ. ಬಾಂಡ್ ಗಳ ಮೇಲೆ ಮಾಡಿದ್ದ ಸಾಲದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ 3,500 ಕೋಟಿ ಸಾವನ್ನು ತೀರಿಸಿದೆ. ಇದನ್ನು ತೋರಿಸಿ ಜನರಿಂದ ಕೇಂದ್ರ ಸರ್ಕಾರ 26 ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಿದೆ ಎಂದು ಆಪಾದಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಗ್ಯಾಸ್ ಬೆಲೆ 414 ರೂ ಇತ್ತು. ಇದಕ್ಕೆ ಆಗಿನ ಯುಪಿಎ ಸರ್ಕಾರ ಗ್ಯಾಸ್ ಮೇಲೆ ಶೇ 50ರಷ್ಟು ಸಬ್ಸಿಡಿ ನೀಡುತ್ತಿತ್ತು. ಈಗ 1000 ರೂಪಾಯಿ ಆಗಿದೆ. ಮೋದಿ ಅವರು 2020ರಿಂದ ಸಬ್ಸಿಡಿ ನೀಡುವುದನ್ನೇ ನಿಲ್ಲಿಸಿದ್ದಾರೆ. ಜನೌಷಧಗಳ ಬೆಲೆಯೂ 10ರಷ್ಟು ಏರಿಕೆಯಾಗಿದೆ. ಅಡುಗೆ ಎಣ್ಣೆ 220 ರೂಪಾಯಿ ಆಗಿದೆ. ಕಬ್ಬಿಣ ಟನ್ ಗೆ 90 ಸಾವಿರ ಆಗಿದೆ. ಇದರಿಂದ ಜನರ ಬದುಕು ದುಸ್ತರವಾಗಿದೆ ಎಂದು ಹೇಳಿದರು.
ಬೆಲೆ ಏರಿಕೆಯ ವೈಫಲ್ಯವನ್ನು ಮುಚ್ಚಿಕೊಳ್ಳಲು ಸರ್ಕಾರ ಹಿಜಾಬ್, ಮುಸ್ಲಿಂ ವರ್ತಕರ ವ್ಯಾಪಾರಕ್ಕೆ ನಿಷೇಧ, ಗೋಹತ್ಯೆ, ಮತಾಂತರ ನಿಷೇಧ ಮೊದಲಾದವುಗಳನ್ನು ಮುಂದಿಟ್ಟುಕೊಂಡು ಜನರ ಮನಸ್ಸನ್ನು ಬೇರೆಡೆ ಸೆಳೆಯುತ್ತಿದೆ. ಬಿಜೆಪಿಗೆ ಮನುಷ್ಯತ್ವ ಇದೆಯಾ ಎಂದು ಪ್ರಶ್ನಿಸಿದರು.


