ಕಳೆದ ಒಂದು ವಾರದಿಂದ ರೈತರ ಬದುಕಿನ ಮೇಲೆ ಗದಾ ಪ್ರಹಾರ ನಡೆಯುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ರಾಜಕೀಯದ ಗುರಿ ಇಟ್ಟುಕೊಂಡು ಒಂದು ಧರ್ಮದ ಮೇಲೆ ಪ್ರಯೋಗ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿಕುಮಾರ್ ಆರೋಪಿಸಿದ್ದಾರೆ.
ಪಶುಸಂಗೋಪನಾ ಇಲಾಖೆಯಿಂದ ಹೊರಡಿಸಿರುವ ಆದೇಶ ಪೊಲೀಸ್ ಹಾಗೂ ಇತರೆ ಅಧಿಕಾರಿಗಳು ಸೇರಿ ಕೋಳಿ, ಕುರಿ ವ್ಯಾಪಾರ ನಡೆಸುತ್ತಿರುವವರ ಮೇಲೆ ನಿಯಂತ್ರ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಬೆಂಗಳೂರು ಹಾಗೂ ಇತರ ಎಲ್ಲಾ ಕಡೆಗಳಲ್ಲಿ ಇನ್ನು ಮುಂದೆ ಮಾಂಸದ ವ್ಯಾಪಾರ ಮಾಡುವವರ ಪ್ರಾಣಿ ವಧೆ ಮಾಡುವ ಮುನ್ನ ಸ್ಟನಿಂಗ್ ಮಾಡಬೇಕು. ಇನ್ನು ಮುಂದೆ ಎಲ್ಲಾ ವ್ಯಾಪಾರಿಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ವ್ಯವಸ್ಥೆ ಇದ್ದರಷ್ಟೇ ಇನ್ನು ಮುಂದೆ ಪರವಾನಗಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದರು.
ಇಡೀ ರಾಜ್ಯದ ರೈತರು ಕುರಿ, ಕೋಳಿ ಮತ್ತು ಮೇಕೆಗಳನ್ನು ಸಾಕುತ್ತಾರೆ. ಅವುಗಳನ್ನು ಉಪಕಸುಬಾಗಿ ಮಾಡುತ್ತಿದ್ದಾರೆ. ಮಾಂಸದ ವ್ಯಾಪಾರ ಮಾಡುವವರಿಗೆ ರೈತರು ತಾವು ಸಾಕಿದ ಕೋಳಿ, ಕುರಿಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಲಾಲ್ ಮಾಡುತ್ತಾರೆ. ಕೆಲವರು ಹಲಾಲ್ ಮಾಡುವುದಿಲ್ಲ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ರಾಜ್ಯದ ರೈತರು ಕರೆ ಮಾಡಿ ಸರ್ಕಾರದ ಈ ಆದೇಶದಿಂದ ನಮ್ಮ ಕುರಿ, ಕೋಳಿಗಳನ್ನು ಕೊಳ್ಳುವವರು ಇಲ್ಲದಂತಾಗಿದೆ. ಕಡಿಮೆ ಬೆಲೆಗೆ ಕೇಳುತ್ತಿದ್ದಾಋಎ. ಒಂದು ಪಕ್ಷದ ಅಧ್ಯಕ್ಷನಾಗಿ ನೀವು ಯಾಕೆ ಸುಮ್ಮನೆ ಕೂತಿದ್ದೀರಿ ಎಂದು ಕೇಳುತ್ತಿದ್ದಾರೆ ಎಂದರು.
ಆರ್.ಎಸ್.ಎಸ್, ಬಿಜೆಪಿಯವರ ಈ ಆದೇಶಕ್ಕೆ ಯಾರೂ ಅಂಜಿಕೊಳ್ಳಬೇಡಿ. ರೈತರು ಹಾಗೂ ವ್ಯಾಪಾರಿಗಳ ಪರವಾಗಿ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ನಿಮಗೆ ತೊಂದರೆಯಾದರೆ ನಮಗೆ ತಿಳಿಸಿ, ನಮ್ಮ ಕಾರ್ಯಕರ್ತರನ್ನು ಕಳಿಸಿ ನಿಮಗೆ ರಕ್ಷಣೆ ಕೊಡಿಸುವ ಕೆಲಸ ಮಾಡುತ್ತೇವೆ. ಇದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಗಳಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನೀವು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದಕ್ಕೆ ಗೌರವ ನೀಡಿ. ಎಲ್ಲರನ್ನು ಒಟ್ಟಾಗಿ ಸೌಹಾರ್ದತೆಯಿಂದ ತೆಗೆದುಕೊಂಡು ಹೋಗುತ್ತೇವೆ ಎಂದು ಪ್ರಮಾಣ ಮಾಡಿದ್ದೀರಿ. ಅವರ ಬದುಕು ಹೊಟ್ಟೆ ಮೇಲೆ ಹೊಡೆಯಬೇಡಿ. ಈಗಾಗಲೇ ಉದ್ಯೋಗ ನಷ್ಟ ಆಗುತ್ತಿದೆ. ವ್ಯಾಪಾರ ನಷ್ಟ ಆಗುತ್ತಿದೆ. ಎಲ್ಲರೂ ಒಟ್ಟಾಗಿ ಬದುಕಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.


