ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಪ್ಯೂ ಹೇರಿದ್ದು, ಇದನ್ನು ಉಲ್ಲಂಘಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ 600ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಸಜಿತ್ ಪ್ರೇಮದಾಸ ಅವರ ನೇತೃತ್ವದಲ್ಲಿ ವಿರೋಧ ಪಕ್ಷದ ಶಾಸಕರು ಭಾನುವಾರ ಆಯೋಜಿಸಿದ್ದ ಪ್ರತಿಭಟನೆಗೆ ಮುಂಚಿತವಾಗಿ ಶನಿವಾರವೇ ಕರ್ಪ್ಯೂ ವಿಧಿಸಲಾಗಿತ್ತು. ಆದರೂ ಕರ್ಪ್ಯೂ ಉಲ್ಲಂಘಿಸಿ ಸರ್ಕಾರದ ವಿರುದ್ದ ಪ್ರತಿಭಟನಾ ರ್ಯಾಲಿಯನ್ನು ನಡೆಸಲು ಪ್ರಯತ್ನಿಸಿದ್ದಾಗಿ ಭಾನುವಾರ ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದಲ್ಲಿ ನೂರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲಂಬೋದ ಸಾಂಪ್ರದಾಯಿಕ ಸ್ವಾತಂತ್ರ್ಯ ಚೌಕದ ಕಡೆಗೆ ಮೆರವಣಿಗೆ ಆರಂಭಿಸಿದರು. ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಮತ್ತು ಅಗತ್ಯ ವಸ್ತುಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟಗಳ ವಿರುದ್ಧ ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಪ್ರತಿಭಟನೆಯನ್ನು ಆಯೋಜಿಸಿದ್ದರು.
ದ್ವೀಪ ರಾಷ್ಟ್ರದಲ್ಲಿನ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಕುರಿತು ಯೋಜಿತ ಸರ್ಕಾರಿ ವಿರೋಧಿ ರ್ಯಾಲಿಗೆ ಮೊದಲೇ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದರಿಂದ ಶ್ರೀಲಂಕಾ ಸರ್ಕಾರ ಶನಿವಾರದಿಂದ 36 ಗಂಟೆಗಳ ಕರ್ಪ್ಯೂ ವಿಧಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಅಶಾಂತಿಯನ್ನು ನಿಭಾಯಿಸಲು ಸರ್ಕಾರ ಕರ್ಪ್ಯೂ ವಿಧಿಸಿದ ನಂತರ ದೇಶವು ಫೇಸ್ ಬುಕ್ ಮತ್ತು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಿಗೆ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


