ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲವಾಗಿ ಬ್ಯಾಂಕ್ ನೌಕರರ ಒಂದು ವಿಭಾಗವು ಕರ್ತವ್ಯಕ್ಕೆ ಹಾಜರಾಗದ ಕಾರಣ ಬ್ಯಾಂಕಿಂಗ್ ಸೇವೆಗಳ ಮೇಲೆ ಭಾಗಶಃ ಪರಿಣಾಮ ಬೀರಿದೆ.
ಆದರೂ ಹೊಸ ತಲೆಮಾರಿನ ಖಾಸಗಿ ವಲಯದ ಬ್ಯಾಂಕ್ ಗಳ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾರ್ವಜನಿಕ ವಲಯದ ಹಲವು ಬ್ಯಾಂಕುಗಳ ವಹಿವಾಟುಗಳ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ಚೆಕ್ ಕ್ಲಿಯರೆನ್ಸ್ ನಲ್ಲಿ ವಿಳಂಬವಾಗಬಹುದು ಮತ್ತು ಮುಷ್ಕರದಿಂದ ಸರ್ಕಾರದ ಖಜಾನೆ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಮುಷ್ಕರದ ಪರಿಣಾಮವು ಪೂರ್ವ ಭಾರತದಲ್ಲಿ ಪ್ರಮುಖವಾಗಿದೆ. ಏಕೆಂದರೆ ಅಲ್ಲಿನ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಅನೇಕ ಶಾಖೆಗಳು ಮುಚ್ಚಲ್ಪಟ್ಟಿವೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿಕೆಯನ್ನು ಉಲ್ಲೇಖಿಸಿ ನ್ಯಾಷನಲ್ ಹೆರಾಲ್ಡ್ ಇಂಡಿಯಾ.ಕಾಂ ವರದಿ ಮಾಡಿದೆ.
ಇತರೆ ಪ್ರದೇಶದಲ್ಲಿ ಅಧಿಕಾರಿಗಳು ಇರುವುದರಿಂದ ಶಾಖೆಗಳು ತೆರೆದಿರುತ್ತವೆ. ಆದರೆ ಅನೇಕ ನೌಕರರು ಮುಷ್ಕರದಲ್ಲಿ ಭಾಗವಹಿಸಿ ಇರುವುದರಿಂದ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.
2012-22 ಬಜೆಟ್ ನಲ್ಲಿ ಘೋಷಿಸಿದಂತೆ ಎರಡು ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮದ ವಿರುದ್ಧ ಬ್ಯಾಂಕ್ ಗಳ ಒಕ್ಕೂಟಗಳು ಪ್ರತಿಭಟನೆ ನಡೆಸುತ್ತಿವೆ. ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಬೇಕು ಮತ್ತು ಸೇವಾ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ.
ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ, ಕೇಂದ್ರ ಕಾರ್ಮಿಕ ಸಂಘಗಳು, ಎಐಟಿಯುಸಿ, ಸಿಐಟಿಯು, ಐಎನ್.ಟಿ.ಯುಸಿ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ಕೊಟ್ಟಿವೆ. ಜನವಿರೋಧಿ ಆರ್ಥಿಕ ನೀತಿಗಳು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿವೆ.


