ನಾನು ರಾಜಕೀಯಕ್ಕೆ ಏಕೆ ಬರುತ್ತಿದ್ದೇನೆ ಎಂದು ಬಹಳ ಮಂದಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ಸಿಗುತ್ತದೆ. ನನಗೆ ಜಾತ್ಯತೀತ ಸಿದ್ದಾಂತ ಬಹಳ ಇಷ್ಟವಾಗಿದ್ದು ಅದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ನಿರ್ದೇಶಕ-ನಿರ್ಮಾಪಕ ಮತ್ತು ನಟ ಎಸ್. ನಾರಾಯಣ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ ನಂತರ ಮಾತನಾಡಿದ ಅವರು, ರಾಜಕೀಯದಲ್ಲಿ ನಾನು ಆಯ್ಕೆ ಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷವನ್ನು. ಕಾರಣ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ರುಣಿಯಾಗಿರಬೇಕು ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಕಷ್ಟು ತ್ಯಾಗಬಲಿದಾನದ ಜೊತೆ ಕಾಂಗ್ರೆಸ್ ನ ಪರಿಶ್ರಮವೂ ಇದೆ. ಇದನ್ನು ಅನೇಕರು ಮರೆತಿದ್ದಾರೆ. ಬ್ರಿಟೀಷರು ಹೋಗುವ ಸಂದರ್ಭದಲ್ಲಿ ದೇಶದ ಸಂಪತ್ತು ದೋಚಿ ಹೋಗಿದ್ದಾರೆ. ಅಂದು ಈ ದೇಶದ ಜನ ಅನ್ನ ಇಲ್ಲದೆ ಹಸಿವಿನಲ್ಲಿದ್ದ ಜನರಿಗೆ ತಿನ್ನಲು ಅನ್ನ ಕೊಟ್ಟು ದುಡಿಯಲು ಕೆಲಸ, ಬದುಕಲು ಧೈರ್ಯ ಕೊಟ್ಟಿದ್ದು ಕಾಂಗ್ರೆಸ್ ಎಂದು ಶ್ಲಾಘಿಸಿದರು.
ರಾಷ್ಟ್ರದ ಒಕ್ಕೂಟ ವ್ಯವಸ್ಥೆ ಗೌರವಿಸಿ, ಐಕ್ಯತೆಯ ಬದ್ದತೆಯನ್ನು ಇಲ್ಲಿಯವರೆಗೂ ಕಾಪಾಡಿಕೊಂಡು ಬರುತ್ತಿರುವುದು ಕಾಂಗ್ರೆಸ್ ಮಾತ್ರ. ಬಡವನಿಂದ ದಲಿತರು, ಹಿಂದುಳಿದ ವರ್ಗಗಳ ಕಣ್ಣೀರು ಒರೆಸುತ್ತಾ ಸದಾ ಅವರ ಬೆನ್ನಿಗೆ ನಿಂತು ನಾವು ಇದ್ದೇವೆ ಎಂದು ದನಿಯಾಗಿರುವುದು ಕಾಂಗ್ರೆಸ್ ಎಂದು ನಾರಾಯಣ್ ಹೇಳಿದರು.
ಪಕ್ಷದಲ್ಲಿ ಹಿರಿಯರಿದ್ದಾರೆ. ನಮ್ಮ ಎಲ್ಲರ ಗುರಿ ಒಂದೇ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಹಗಲಿರುಳು ದುಡಿಯುತ್ತೇನೆ. ಕೊಟ್ಟ ಕೆಲಸದಲ್ಲಿ ನಾನು ಯಶಸ್ಸು ಸಾಧಿಸುತ್ತೇನೆ ಎಂದು ಭರವಸೆ ನೀಡಿದರು.
ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ತಿಮ್ಮಯ್ಯ ಪುರ್ಲೆ ಮಾತನಾಡಿ, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಹೊರತುಪಡಿಸಿದರೆ ಇನ್ಯಾವುದೇ ಪಕ್ಷ ಇಲ್ಲ. ನಾನು ಜ್ಯಾತ್ಯತೀತ ಹಾಗೂ ಪ್ರಗತಿಪರ ನಿಲುವುಗಳಿಂದ ಬಂದಿದ್ದೇನೆ. ನನ್ನಂತಹ ಹಲವು ಮಂದಿ ಪ್ರಗತಿಪರರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ತಿಳಿಸಿದರು.