ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ತುಮಕೂರಿನ ಕನ್ನಡಭವನದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಗುಬ್ಬಿ ತಾಲೂಕಿನ ಯರಬಳ್ಳಿ ಗ್ರಾಮದ ರೈತ ಮಹಿಳೆ ಕುಮಾರಿ ಅರುಣ ಅವರಿಗೆ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜೇಂದ್ರ ಅವರು ದಿವಂಗತ ಸೋಮಾವತಿ ಮತ್ತು ದಿವಂಗತ ಇಂದಿರಮ್ಮ ನೆನಪಿನ ಸಾಧಕ ಮಹಿಳೆ ದತ್ತಿನಿಧಿ ಪ್ರಶಸ್ತಿಯನ್ನು ಇಟ್ಟಿದ್ದು ಇದನ್ನು ಕವಿಗಳಷ್ಟೇ ಅಲ್ಲದೆ ಕೃಷಿಯಲ್ಲಿ ಸಾಧನೆ ಮಾಡಿರುವವರಿಗೆ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಹೇಳಿದ್ದರು. ಅದರಂತೆ ಸಾಯವಯ ಕೃಷಿಯಲ್ಲಿ ಸಾಧನೆ ಮಾಡಿರುವ ಗುಬ್ಬಿಯ ಅರುಣಾ ಅವರಿಗೆ ಈ ಬಾರಿಯ ಪ್ರಶಸ್ತಿ ಪ್ರದಾನ ಮಾಡಿದ್ದೇವೆ ಎಂದು ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣಾ, ನಮ್ಮ ತಂದೆಗೆ ನಾವು ಮೂರು ಮಂದಿ ಹೆಣ್ಣು ಮಕ್ಕಳು. ಡಿಇಡಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಅಪ್ಪ ತೀರಿಕೊಂಡರು. ಆಗ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ನನ್ನ ಸಹೋದರಿಯರು ಮತ್ತು ತಾಯಿಯನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಈ ಹಂತದಲ್ಲಿ ನನ್ನ ತಾಯಿ ನನ್ನ ನೆರವಿಗೆ ಬಂದರು.
ಪಕ್ಕದ ಜಮೀನಿನವರು ಆಡಿಕೊಳ್ಳತೊಡಗಿದರು. ಹೆಣ್ಣು ಮಕ್ಕಳು ಏನು ಮಾಡಲು ಸಾಧ್ಯ ಎಂದು ಚುಚ್ಚಿ ನುಡಿದರು. ಆಗಲೇ ನಾನ ಛಲದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡೆ. ಹಿರಿಯರನ್ನು ಕೇಳಿ ಮಾಹಿತಿ ತೆಗೆದುಕೊಂಡೆ. ಛಲ ಬಿಡದೆ ಕೃಷಿ ಮಾಡತೊಡಗಿದ್ದೇನೆ. ಕೃಷಿಗೆ ಯಾವುದೇ ಪದವಿಯು ಬೇಕಿಲ್ಲ. ಶ್ರಮ ಹಾಕಿದರೆ ಭೂಮಿ ನಮ್ಮನ್ನು ಕೈಬಿಡುವುದಿಲ್ಲ.
ಇರುವ ನಾಲ್ಕು ಎಕರೆ ಭೂಮಿಯಲ್ಲಿ ಕೃಷಿ ಮಾಡತೊಡಗಿದೆ. ಸಾವಯವ ಕೃಷಿ ಮಾಡಿದೆ. ನನ್ನ ಶ್ರಮಕ್ಕೆ ಭೂಮಿ ಕೈಬಿಡಲಿಲ್ಲ. ಕೃಷಿ ಮಾಡಬೇಕೆಂದರೆ ಹೆಚ್ಚಿನ ಓದು ಅಗತ್ಯವಿಲ್ಲ. ಬುದ್ದಿವಂತಿಕೆ ಇದ್ದರೆ ಒಳ್ಳೆಯ ರೈತರಾಗಬಹುದು. ಕೆಲವೊಮ್ಮೆ ಯಾವ ಬೆಳೆ ಇಟ್ಟರೂ ಬರುವುದಿಲ್ಲ. ಆದರೂ ರೈತರು ಕುಗ್ಗದೆ ದುಡಿಯುತ್ತಾರೆ.
ಡಿಗ್ರಿ ಮಾಡಿದೆ ಯಾವ ಕೆಲಸ ಸಿಗುತ್ತದೆ ಎಂಬ ಯೋಚನೆ ಬರುತ್ತದೆ. ಮುಂದೇನು ಮಾಡಬೇಕು ಎಂಬ ಸಮಸ್ಯೆ ಕಾಡುತ್ತದೆ. ಆದರೆ ರೈತರು ಭೂಮಿಗೆ ಬೀಜ ಬಿತ್ತಿ ಕೆಲಸ ಮಾಡುತ್ತಾರೆ. ಉತ್ತಮ ಫಸಲು ಬಂದರೆ ಖುಷಿಪಡುತ್ತಾರೆ. ಇಲ್ಲದಿದ್ದರೆ ಎರಡು ದಿನ ಕೈಹೊತ್ತು ಕೂತು ನಂತರ ಮೊದಲಿನಂತೆಯೇ ಆಗುತ್ತಾರೆ. ರೈತರಿಗೆ ದೊಡ್ಡ ಸಮಸ್ಯೆ ಎಂದರೆ ಉತ್ತಮ ಮಾರುಕಟ್ಟೆ ದೊರೆಯುವುದಿಲ್ಲ. ಹಾಗಾಗಿ ರೈತರು ನಷ್ಟ ಅನುಭವಿಸುವಂತೆ ಆಗಿದೆ.
ಒಳ್ಳೆಯ ಮಾರುಕಟ್ಟೆ ಸಿಕ್ಕರೆ ಅವರು ಜೀವನದಲ್ಲಿ ಎಂದೂ ಸೋಲುವುದಿಲ್ಲ. ಇಂಜಿನಿಯರ್, ವೈದ್ಯನಾಗಿ ಲಕ್ಷ ರೂಪಾಯಿ ವೇತನ ಪಡೆಯಲು ಸಾಧ್ಯ. ಹಣವನ್ನು ತಿನ್ನಲು ಸಾಧ್ಯವಿಲ್ಲ. ರೈತರು ಬೆಳೆಯದಿದ್ದರೆ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ರೈತ ದುಡಿಯದಿದ್ದರೆ ಜಗತ್ತು ಸಮಸ್ಯೆ ಎದುರಿಸುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಲೇಖಕಿ ಮಲ್ಲಿಕಾ ಬಸವರಾಜು, ಡಾ.ರಜನಿ, ಸುಕನ್ಯಾ, ಡಾ.ಆಶಾರಾಣಿ ಮಾತನಾಡಿದರು.