ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವಂತೆ ಕಾಂಗ್ರೆಸ್ ಪಾದಯಾತ್ರೆ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಮ್ಮ ಕಾರ್ಯಕ್ರಮವನ್ನು ಹೈಜಾಕ್ ಮಾಡಲಾಗಿದೆ ಎಂದು ಹೇಳಿದ್ದೇಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಗೌರಿಬಿದನೂರಿನಲ್ಲಿ ನಡೆದ ಪಕ್ಷದ ಡಿಜಿಟಲ್ ಸದಸ್ಯತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆ ಡಿಎಸ್ ವತಿಯಿಂದ ಜಲಧಾರೆ ಕಾರ್ಯಕ್ರಮ ಮಾಡಿದರೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಹೇಳಿದರು.
ಹೋರಾಟದಿಂದ ನೀರು ಹರಿಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದರು. ಹಾಗಾದರೆ ಮೇಕೆದಾಟು ಯೋಜನೆಗೆ 1000 ಕೋಟಿ ರೂಪಾಯಿ ಯಾಕೆ ಕೊಟ್ಟರು. ದೆಹಲಿಗೆ ಹೋಗಿ ಅನುಮತಿ ಪಡೆಯುತ್ತೇನೆ ಎಂದು ಯಾಕೆ ಹೇಳಿದರು ಎಂದು ಪ್ರಶ್ನಿಸಿದ್ದಾರೆ.
ಶೇಖಾವತ್ ಅವರು ಎರಡು ರಾಜ್ಯಗಳ ಜೊತೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತೇನೆ ಎಂದರು. ಅಲ್ಲೇ ಮುಖ್ಯಮಂತ್ರಿಗಳು ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಬೇಕಿತ್ತು. ಈ ವಿಚಾರದಲ್ಲಿ ಕೋಳಿ ಕೇಳಿ ಮಸಾಲೆ ಅರೆಯುವ ಅಗತ್ಯವಿಲ್ಲ ಎಂದರು.
ತಮಿಳುನಾಡು ಪಾಲಿನ ನೀರು ಹರಿಯುತ್ತದೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗೆ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಯಾಗುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಬೇಕು. ನೀವು ಹೇಳದಿರುವುದೇ ತಪ್ಪು ಎಂದು ಹೇಳಿದ್ದಾರೆ.
ಕಾನೂನು ಪ್ರಕಾರ ಪರಿಸರ ಇಲಾಖೆ ಅನುಮತಿ ಬೇಕು. ತಮಿಳುನಾಡು ಅನುಮತಿ ಯಾಕೆ ಬೇಕು? ನಿಮ್ಮ 25 ಸಂಸದರ ಜತೆ ನಮ್ಮನ್ನು ಕರೆದುಕೊಂಡು ಹೋಗಿ ಮಾತನಾಡಿ, ನಾವು ಬೇಕಾಧರೆ ನಿಮಗೆ ಚಪ್ಪಾಳೆ ಹೊಡೆಯುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಜಲಶಕ್ತಿ ಸಚಿವರು ಮಧ್ಯಸ್ಥಿಕೆ ವಹಿಸಲಿ. ನಮಗೆ ಬೇಸರವಿಲ್ಲ. ಅವರು ಇಚ್ಛಾಶಕ್ತಿಯನ್ನು ಮೊದಲು ಪ್ರದರ್ಶಿಸಲಿ. ಪರಿಸರ ಇಲಾಖೆ ಅನುಮತಿ ಕೊಡಿಸಲಿ. ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಾಡಿದರೆ ತಪ್ಪಿಲ್ಲ. ಆದರೆ ಅವರು ತಮ್ಮ ಕೈಯಲ್ಲಿ ಈ ಯೋಜನೆ ಮಾಡುವ ಶಕ್ತಿಯಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.