ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಪ್ರಗತಿ ವಿರೋಧಿಯಾಗಿದೆ. ಅಷ್ಟೇ ಅಲ್ಲ ಚುನಾವಣೆ ಕೇಂದ್ರೀಕರಿಸಿ ಘೋಷಣೆ ಮಾಡಲಾಗಿದೆ. ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ವಿಧಾನ ಪರಿಷತ್ ನ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಬಜೆಟ್‌ನಲ್ಲಿ ತುಳಿತಕ್ಕೊಳಗಾದವರು, ದುಡಿಯುವ ವರ್ಗಗಳು, ಮಹಿಳೆಯರನ್ನು ನಿರ್ಲಕ್ಷಿಸಲಾಗಿದೆ. ಹಾಗೆಯೇ ರೈತರಿಗೆ ಶಕ್ತಿ ತುಂಬಬಲ್ಲ ಮಹತ್ವದ ಯೋಜನೆಗಳು ಬಜೆಟ್‌ನಲ್ಲಿ ಇಲ್ಲ. ರೇಷ್ಮೆ ಬೆಳೆಗಾರರು, ತೋಟಗಾರಿಕೆ ಬೆಳೆಗಾರರ ಅಭಿವೃದ್ಧಿಗೆ ಪೂರಕವಾದ ಯಾವ ಕ್ರಮಗಳನ್ನೂ ಬಜೆಟ್‌ನಲ್ಲಿ ಪ್ರಕಟಿಸಿಲ್ಲ ಎಂದು ಟೀಕಿಸಿದ್ದಾರೆ.
ಗೋವುಗಳ ಸಂರಕ್ಷಣೆಗೆ 100 ಗೋಶಾಲೆಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಇದೊಂದು ಪೊಳ್ಳು ಘೋಷಣೆ. ಈವರೆಗೆ ಒಂದು ಗೋಶಾಲೆಯೂ ಆರಂಭವಾಗಿಲ್ಲ. ಹಾಗಾಗಿ 100 ಗೋಶಾಲೆ ತೆರೆಯುವುದು ಕನಸಿನ ಮಾತು ಎಂದು ಲೇವಡಿ ಮಾಡಿದ್ದಾರೆ.
ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಈ ಬಜೆಟ್‌ನಲ್ಲಿ ತೀವ್ರ ಅನ್ಯಾಯ ಮಾಡಲಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಕಳೆದ ವರ್ಷ 500 ಕೋಟಿ ರೂ ಅನುದಾನ ಒದಗಿಸಲಾಗಿತ್ತು. ಈ ಬಾರಿ ಅದನ್ನು ₹400 ಕೋಟಿಗೆ ಇಳಿಕೆ ಮಾಡಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳಿಗೆ ಕಳೆದ ವರ್ಷ 1,500 ಕೋಟಿ ರೂ ಒದಗಿಸಲಾಗಿತ್ತು. ಈ ಬಾರಿ ಈ ಉದ್ದೇಶಕ್ಕೆ ನೀಡಿರುವ ಅನುದಾನ 200 ಕೋಟಿಯನ್ನೂ ದಾಟಿಲ್ಲ. ಕ್ರೈಸ್ತ ಧರ್ಮೀಯರ ಅಭಿವೃದ್ಧಿಗೆ ಹಿಂದಿನ ವರ್ಷ 200 ಕೋಟಿ ಒದಗಿಸಲಾಗಿತ್ತು. ಈ ಬಾರಿ ಕೇವಲ 50 ಕೋಟಿ ಒದಗಿಸಲಾಗಿದೆ ಎಂದರು.
ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪೂರಕ ಕ್ರಮಗಳೇ ಬಜೆಟ್‌ನಲ್ಲಿ ಇಲ್ಲ. ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚು ಆದ್ಯತೆ ನೀಡಿಲ್ಲ. ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ತಡೆಯುವ ಕುರಿತು ಮುಖ್ಯಮಂತ್ರಿ ಏನನ್ನೂ ಹೇಳಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ಹಾದಿಯಲ್ಲೇ ಸಾಗುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ, ಇಲ್ಲಿಯೂ ಸಾರ್ವಜನಿಕ ಉದ್ಯಮಗಳನ್ನು ನಾಶ ಮಾಡಲು ಹೊರಟಿದೆ. ಸಾರ್ವಜನಿಕ ಉದ್ಯಮಗಳಿಂದ ಬಂಡವಾಳ ಹಿಂತೆಗೆಯಲು ಕ್ರಮಕೈಗೊಳ್ಳುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದು ಅಪಾಯಕಾರಿ ನಡೆ. ಇದರಿಂದ ಸರ್ಕಾರ ಸ್ವಾಮ್ಯದ ಉದ್ದಿಮೆಗಳು ಬಂಡವಾಳಶಾಹಿಗಳ ಕೈವಶವಾಗಲಿವೆ ಎಂದರು.
ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸುವ ಪ್ರಯತ್ನ ಈ ಬಜೆಟ್ ನಲ್ಲಿ ವ್ಯಾಪಕವಾಗಿದೆ. ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಲು ಕಾನೂನು ತರುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಸಂಘ ಪರಿವಾರದ ಒತ್ತಡಕ್ಕೆ ಮಣಿದು ಈ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.


