ಪಾಕಿಸ್ತಾನದ ವಾಯವ್ಯ ಭಾಗದ ಪೇಶಾವರದಲ್ಲಿರುವ ಶಿಯಾ ಮುಸ್ಲೀಂ ಮಸೀದಿಯೊಳಗೆ ಪ್ರಬಲ ಬಾಂಬ್ ಸ್ಫೋಟಗೊಂಡು 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೇಶಾವರದ ಹಳೆಯ ನಗರದಲ್ಲಿರುವ ಕುಚಾ ರಿಸಲ್ವಾರ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ನೂರಾರು ಮಂದಿ ಮುಸ್ಲೀಮರು ಸೇರಿದ್ದರು. ಈ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ವಹೀದ್ ಖಾನ್ ಹೇಳಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಂಬುಲೆನ್ಸ್ ಗಳು ದಟ್ಟಣೆಯ ಕಿರಿದಾದ ಬೀದಿಗಳ ಮೂಲಕ ಗಾಯಾಳುಗಳನ್ನು ಲೇಢಿ ರೀಡಿಂಗ್ ಆಸ್ಪತ್ರೆಗೆ ಸಾಗಿಸಿದವು. ಗಾಯಾಳುಗಳಿಗೆ ಆಸ್ಪತ್ರೆಯ ವೈದ್ಯರು ತ್ವರಿತಗತಿಯಲ್ಲಿ ಕೆಲಸ ಮಾಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟದ ಹೊಣೆಗಾರಿಕೆಯನ್ನು ಇದುವರೆಗೂ ಯಾವುದೇ ಸಂಘಟನೆಯು ವಹಿಸಿಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ತಾಲಿಬಾನ್ ಸಂಘಟನೆಯು ಈ ಕೃತ್ಯ ಎಸಗಿರಬಹುದು. ಆಫ್ಗಾನಿಸ್ಥಾನದ ಗಡಿಯಲ್ಲಿ ಇದೇ ರೀತಿಯ ದಾಳಿಗಳನ್ನು ನಡೆಸಿರುವ ಉದಾಹರಣೆಗಳು ಇವೆ ಎಂದು ಮಾಧ್ಯಮಗಳು ಹೇಳಿವೆ.