ಇಸ್ಲಾಂ ಧರ್ಮದ ಹೆಣ್ಣು ಮಕ್ಕಳು ಹಿಂದಿನಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದು, ಅದನ್ನು ಯಥಾಸ್ಥಿತಿ ಮುಂದುವರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದರೆ ಕರಾವಳಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಪ್ಪಿಸಬಹುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರಾವಳಿಯ ಶಾಲೆ-ಕಾಲೇಜುಗಳಿಗೆ ಹಿಂದಿನಿಂದಲೂ ಹಿಜಾಬ್ ಧರಿಸಿಕೊಂಡೇ ಹೆಣ್ಣು ಮಕ್ಕಳು ಬರುತ್ತಿದ್ದರು. ನಾಲ್ಕೈದು ಹೆಣ್ಣು ಮಕ್ಕಳು ಹಿಜಾಬ್ ಧರಿಸಿಕೊಂಡು ಶಾಲೆಗೆ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಆದರೆ ಇದಕ್ಕೆ ವಿರುದ್ಧವಾಗಿ ಕೇಸರಿ ಶಾಲು ಹಾಕಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಿಜಾಬ್ ಗೆ ವಿರುದ್ಧವಾಗಿ ಹಿಂದೂ ಧರ್ಮೀಯರು ಕೇಸರಿ ಶಾಲು, ಕೇಸರಿ ಬಟ್ಟೆಗಳನ್ನು ಹಾಕಿಕೊಂಡಿರುವುದು ದುರುದ್ದೇಶ ಪೂರಿತವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಕೇಸರಿ ಶಾಲು ಹಾಕಿಕೊಂಡು ಬರುತ್ತಿರುವ ಯುವಕರನ್ನು ನಿಯಂತ್ರಿಸದೆ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಹೀಗೆ ಮಾಡುತ್ತಿದೆ. ಹೆಣ್ಣು ಮಕ್ಕಳು ಹಾಕಿಕೊಂಡು ಬರುತ್ತಾರೆ ಎಂದರೆ ಇವರೇಕೆ ಕೇಸರಿ ಶಾಲು ಹಾಕಿಕೊಂಡು ಬರಬೇಕು ಎಂದು ಕುಮಾರ ಸ್ವಾಮಿ ಪ್ರಶ್ನಿಸಿದರು.
ಕರಾವಳಿಯಲ್ಲಿ ಬಿಜೆಪಿ ಬೆಂಬಲಿಗರು ಹೊಸ ಸಂಪ್ರದಾಯ ಹುಟ್ಟುಹಾಕಿರುವುದು ಒಳ್ಳೆಯ ಲಕ್ಷಣವಲ್ಲ. ಹಾಗಾಗಿ ಹಿಂದಿನಿಂದಲೂ ಹಿಜಾಬ್ ಹಾಕಿಕೊಂಡು ಬಂದಿರುವುದನ್ನು ಯಥಾಸ್ಥಿತಿ ಕಾಪಾಡಬೇಕು. ಆಗ ವಿವಾದ ಬಗೆಹರಿಯುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜನರ ಮನಸ್ಸನ್ನು ಬೇರೆ ಕಡೆ ಕೇಂದ್ರೀಕರಿಸಲು ಇಂತಹ ವಿವಾದಗಳನ್ನು ಹುಟ್ಟುಹಾಕುತ್ತಿದೆ. ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಕೇಸರಿ ಶಾಲು ಹಾಕಿಕೊಂಡು ಬರುವ ವಿದ್ಯಾರ್ಥಿಗಳಿಗೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದರು.