ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ದೇಶದ ವೇತನದಾರರು ಮತ್ತು ಮಧ್ಯಮ ವರ್ಗದವರಿಗೆ ಯಾವುದೇ ಪರಿಹಾರ ಕ್ರಮಗಳನ್ನು ಘೋಷಿಸದೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ, ವೇತನ ಕಡಿತ ಮತ್ತು ಹೆಚ್ಚಿನ ಹಣದುಬ್ಬರದಿಂದಾಗಿ ವೇತನದಾರರು ಮತ್ತು ಮಧ್ಯಮ ವರ್ಗದ ಜನರು ತೊಂದರೆಗೆ ಈಡಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಸಾಂಕ್ರಾಮಿಕದಿಂದ ಎಲ್ಲಾ ಸುತ್ತಿನ ವೇತನ ಕಡಿತ ಮತ್ತು ಹಣದುಬ್ಬರನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಭಾರತದ ವೇತನ ಪಡೆಯುವ ವರ್ಗ ಮತ್ತು ಮಧ್ಯಮ ವರ್ಗವು ಪರಿಹಾರಕ್ಕಾಗಿ ಆಶಿಸುತ್ತಿದ್ದರು. ನೇರ ತೆರಿಗೆ ಕ್ರಮಗಳಲ್ಲಿ ಹಣಕಾಸು ಸಚಿವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅವರನ್ನು ನಿರಾಸೆಗೊಳಿಸಿದ್ದಾರೆ ಎಂದು ಆರೋಪಿಸಿದರು.
ಇದು ಭಾರತದ ವೇತನ ವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ದ್ರೋಹ ಬಗೆದಂತೆ ಆಗಿದೆ. ಬಜೆಟ್ 2022ರ ಕೇಂದ್ರ ಬಜೆಟ್ ನೀರಸದಾಯಕವಾಗಿದೆ ಎಂದು ಹೇಳಿದರು.
ಹಣಕಾಸು ಸಚಿವರು 2022-23ರ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ ಕೂಡಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಡಿಜಿಟಲ್ ರೂಪಾಯಿ ಬಿಡುಗಡೆಗೆ ಸಿದ್ದತೆ:
ಕ್ರಿಪ್ಟೋ ಕರೆನ್ಸಿಗಳು ಮತ್ತು ಇತರೆ ವರ್ಚುವಲ್ ಆಸ್ತಿಗಳ ತೆರಿಗೆಯ ಬಗ್ಗೆ ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ ನಿರ್ಮಲಾ, ಅಂತಹ ಆಸ್ತಿಗಳ ವಹಿವಾಟಿನಿಂದ ಬರುವ ಆದಾಯದ ಮೇಲೆ ಶೇ.30ರಷ್ಟು ತೆರಿಗೆ ಪ್ರಸ್ತಾಪಿಸಿದರು.
ಕ್ರಿಪ್ಟೋ ಮತ್ತು ಡಿಜಿಟಲ್ ಸ್ವತ್ತುಗಳಲ್ಲಿನ ಉಡುಗೊರೆಗಳಿಗೆ ಸಹ ತೆರಿಗೆ ವಿಧಿಸಲಾಗುವುದು. ಉದ್ಯಮದ ದೊಡ್ಡ ವಿಭಾಗಗಳಿಂದ ಬೇಡಿಕೆಗಳನ್ನು ಪೂರೈಸಿದ ಅವರು, 2022-23 ರಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರದ ಮೇಲೆ ಆರ್‌ಬಿಐ ಡಿಜಿಟಲ್ ರೂಪಾಯಿ ಬಿಡುಗಡೆ ಮಾಡಲಿದೆ ಎಂದು ಹೇಳಿದರು.