ಸಹಾಯಕ ಸಬ್ ಇನ್ಸ್ ಪೆಕ್ಟರ್ ನಾರಾಯಣ್ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಹಲ್ಲೆ ನಡೆಸಿರುವ ನಾರಾಯಣ್ ಅವರನ್ನು ಅಮಾನತುಗೊಳಿಸಿದ್ದು ಆರೋಪದ ಕುರಿತು ತನಿಖೆ ಆರಂಭವಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಬಿ.ಅರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಹಲಸೂರು ಗೇಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿದ್ದ ನಾರಾಯಣ್ ವಿಶೇಷಚೇತನ ಮಹಿಳೆಯನ್ನು ಅವಹೇಳನ ಮಾಡಿದ್ದಲ್ಲದೆ ಕಲ್ಲು ತೂರಾಟ ನಡೆಸಿ ಥಳಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಳಿಕ ನಾರಾಯಣ್ ಮಹಿಳೆ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಋಎ. ಪೊಲೀಸರು ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 332 ಮತ್ತು ಸೆಕ್ಷನ್ 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜನವರಿ 24ರಂದು ಸಂಜೆ ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದ ವಾಹನವನ್ನು ಎಳೆದುಕೊಂಡು ಹೋಗುವ ವಿಚಾರವಾಗಿ ಮಹಿಳೆ ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳವಾಡಿದ್ದರು. ಆ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


