ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಬಿಜೆಪಿ ಸರ್ಕಾರದ ಲಂಚಾವತಾರವನ್ನು ಕಂಡರೂ ಕಾಣದಂತೆ ಸುಮ್ಮನಿರುವುದು ಏಕೆ? ಈ ಕಮಿಷನ್ ದಂಧೆಯಲ್ಲಿ ಅವರ ಪಾಲೆಷ್ಟು? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರದ ಸಚಿವರು, ಅಧಿಕಾರಿಗಳು ಸರ್ಕಾರಿ ಟೆಂಡರ್ ಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ಆದರೆ ಪ್ರಧಾನಿ ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಟಿ.ಎಸ್.ಪಿ ಯೋಜನೆ ಅಡಿ ಸ್ವಉದ್ಯೋಗ ಕೈಗೊಳ್ಳುವ ಬುಡಕಟ್ಟು ಜನಾಂಗದ ಜನರಿಗಾಗಿ 63 ಕೋಟಿ ರೂಪಾಯಿ ಅನುದಾನ ನೀಡಿದ್ದೆವು, ಈ ವರ್ಷ ಬಿಜೆಪಿ ಸರ್ಕಾರ ಕೇವಲ ರೂ. 20 ಕೋಟಿ ಅನುದಾನ ನೀಡಿದ್ದಾರೆ ಎಂದು ಅಂಕಿಅಂಶಗಳ ಸಹಿತ ವಿವರ ನೀಡಿದ್ದಾರೆ.
ಪರಿಶಿಷ್ಟ ಜಾತಿ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಸ್.ಸಿ.ಪಿ ಯೋಜನೆಯಡಿ ನಮ್ಮ ಸರ್ಕಾರ ಇದ್ದಾಗ 2017-18 ರಲ್ಲಿ 164 ಕೋಟಿ ಅನುದಾನ ನೀಡಿತ್ತು. ಈ ವರ್ಷ ಅದನ್ನು ಬಿಜೆಪಿ ಸರ್ಕಾರ ರೂ. 50 ಕೋಟಿಗೆ ಇಳಿಸಿದೆ ಎಂದು ದೂರಿದ್ದಾರೆ.
ಗಂಗಾ ಕಲ್ಯಾಣ ಯೋಜನೆಗೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ 2017-18 ರಲ್ಲಿ 300 ಕೋಟಿ ಖರ್ಚು ಮಾಡಿತ್ತು, ಈ ವರ್ಷದ ಬಜೆಟ್ ನಲ್ಲಿ 30 ಕೋಟಿ ಮಾತ್ರ ನೀಡಿದ್ದಾರೆ. ಇದೇನಾ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಬಿಜೆಪಿ ಕರ್ನಾಟಕ ಎಂದು ಲೇವಡಿ ಮಾಡಿದ್ದಾರೆ.
2017-18 ರ ನನ್ನ ಬಜೆಟ್ ಗಾತ್ರ 2.02 ಲಕ್ಷ ಕೋಟಿ ರೂಪಾಯಿ ಇತ್ತು, ಈ ವರ್ಷದ ಬಜೆಟ್ ಗಾತ್ರ 2.47 ಲಕ್ಷ ಕೋಟಿ. ನಮ್ಮ ಸರ್ಕಾರ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗೆ ನೀಡಿದ್ದ ಹಣ 30,150 ಕೋಟಿ, ಈ ವರ್ಷ ರಾಜ್ಯ ಬಿಜೆಪಿ ಸರ್ಕಾರ ನೀಡಿರುವ ಹಣ 25,000 ಕೋಟಿ.ಮಾತ್ರ ಎಂದು ಹೇಳಿದ್ದಾರೆ.
ಸಾಮಾನ್ಯ ಜನ ಖರೀದಿ ಮಾಡುವ ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ, ಸಿಮೆಂಟ್, ರಸ ಗೊಬ್ಬರದ ಮೇಲೆ ತೆರಿಗೆ ಹೆಚ್ಚು ಮಾಡಲಾಗಿದೆ. ಗ್ಯಾಸ್ ಗೆ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆದು ಶ್ರೀಮಂತರ ಹೊಟ್ಟೆ ತುಂಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಗಿ ಖರೀದಿಯನ್ನು 5 ಲಕ್ಷ ಟನ್ ನಿಂದ 2 ಲಕ್ಷ ಟನ್ ಗೆ ಇಳಿಸಿದ್ದಾರೆ. ಈ ವರ್ಷ 2 ಲಕ್ಷ ಟನ್ ತೊಗರಿ ಖರೀದಿ ಮಾಡಬೇಕಿತ್ತು, ಆದರೆ ಈವರೆಗೆ ರಾಜ್ಯ ಬಿಜೆಪಿ ಸರ್ಕಾರ ಖರೀದಿಸಿರುವುದು 40,000 ಟನ್ ಮಾತ್ರ. ತೊಗರಿ ಬೆಳೆದ ರೈತರ ಕಷ್ಟ ಕೇಳುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಕೃಷಿ ಉತ್ಪನ್ನಗಳ ಖರೀದಿಗೆ ಮುಕ್ತ ಅವಕಾಶ ನೀಡಿದ್ದರಿಂದ ದಲ್ಲಾಳಿಗಳು ಲಾಭ ಹೊಂದಿದರೆ, ಎ.ಪಿ.ಎಂ.ಸಿ ಗಳು ನಷ್ಟದ ಹಾದಿ ಹಿಡಿದಿವೆ. ಎ.ಪಿ.ಎಂ.ಸಿ ಗಳಿಂದ 2019-20 ರಲ್ಲಿ 600 ಕೋಟಿ ಆದಾಯ ಬಂದಿತ್ತು, ಈಗದು 106 ಕೋಟಿಗೆ ಇಳಿದಿದೆ ಎಂದು ಅಂಕಿಅಂಶಗಳ ಸಹಿತ ವಿವರಿಸಿದ್ದಾರೆ.
ಪ್ರವಾಹದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಹಾರ ನೀಡುವಂತೆ ಸದನದಲ್ಲಿ ನಾನು ಒತ್ತಾಯ ಮಾಡಿದ್ದೆ, ಕೊನೆಗೆ ಎರಡು ಪಟ್ಟು ಮಾಡಿದ್ರು, ಆದರೆ ಇವತ್ತಿನವರೆಗೆ ಒಂದು ರೂಪಾಯಿ ಹಣವನ್ನೂ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ದೂರಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಕಾರ್ಮಿಕರಿಗೆ 237 ಕೋಟಿ ರೂಪಾಯಿ ಪರಿಹಾರ ಕೊಟ್ಟಿದ್ದೇವೆ ಎಂದು ರಾಜ್ಯ ಬಿಜೆಪಿ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತೆ, ಈ ಕಾರ್ಮಿಕರ ಕಲ್ಯಾಣ ನಿಧಿ ಕಾರ್ಮಿಕರೇ ನೀಡಿರುವ ಹಣ, ಸರ್ಕಾರ ತನ್ನ ಕೈಯಿಂದ ಕೊಟ್ಟಿರುವುದಲ್ಲ ಎಂದು ಟೀಕಿಸಿದ್ದಾರೆ.


