ಜನವರಿ 31ರಿಂದ ಕರ್ನಾಟಕ ರಾಜ್ಯದಲ್ಲಿ ವಿಧಿಸಲಾಗಿದ್ದ ರಾತ್ರಿ ಕರ್ಪ್ಯೂವನ್ನು ಹಿಂತೆಗೆದುಕೊಳ್ಳುವ ಜೊತೆಗೆ ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಸರ್ಕಾರದ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.
ಕೊವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಶೇ.2ರಷ್ಟಿದ್ದು ಚೇತರಿಕೆ ಪ್ರಮಾಣ ಹೆಚ್ಚುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಸೋಮವಾರದಿಂದ ಎಲ್ಲಾ ತರಗತಿಗಳು ಕೊವಿಡ್ ನಿಯಮಗಳು ಮತ್ತು ಪ್ರೋಟೋಕಾಲ್ ನ ಕಟ್ಟುನಿಟ್ಟಿನ ಅನುಷ್ಠಾನದೊಂದಿಗೆ ಶಾಲೆಗಳು ಕಾರ್ಯ ನಿರ್ವಹಿಸಲಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ರಾಜ್ಯದ ಕೊವಿಡ್ ಪರಿಸ್ಥಿತಿಯ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡ ನಂತರ ಈ ವಿಷಯವನ್ನು ಶಿಕ್ಷಣ ಸಚಿವ ನಾಗೇಶ್ ಮಾಧ್ಯಮಗಳಿಗೆ ತಿಳಿಸಿದರು.
ಪರಿಷ್ಕೃತ ಮಾರ್ಗಸೂಚಿಗಳ ಭಾಗವಾಗಿ ಸರ್ಕಾರಿ ಕಚೇರಿಗಳು ಶೇ.50ರ ಬದಲಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತವೆ. ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಕ್ಲಬ್ ಗಳು, ಪಬ್ ಗಳು ಮತ್ತು ಬಾರ್ ಗಳು ಸಹ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ ಎಂದು ಹೇಳಿದರು.
ಶೇ.50ರಷ್ಟು ಸಾಮರ್ಥ್ಯವು ಥಿಯೇಟರ್ ಗಳು, ಆಡಿಟೋರಿಯಂಗಳು ಮತ್ತು ಮಲ್ಟಿಪ್ಲೆಕ್ಸ್ ಗಳು ಮುಂದುವರಿಯುತ್ತದೆ. ಜಿಮ್ ಗಳು ಮತ್ತು ಈಜುಕೊಳಗಳು ಸಹ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಕೊವಿಡ್ ನಿಯಮಗಳಲ್ಲಿ ತಿಳಿಸಲಾಗಿದೆ.
ಮೆಟ್ರೋ ರೈಲು ಮತ್ತು ಇತರೆ ಸಾರ್ವಜನಿಕ ಸಾರಿಗೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ.
ಮದುವೆ ಕಾರ್ಯಗಳು ಒಳಾಂಗಣದಲ್ಲಿ ನಡೆಯಲಿದ್ದು 200 ಮಂದಿ ಭಾಗವಹಿಸಲು ಅವಕಾಶ ನೀಡಿದೆ. ಹೊರಾಂಗಣದಲ್ಲಿ 300 ಜನರು ಸೇರಲು ಅನುಮತಿಸಲಾಗಿದೆ ಎಂದು ಕೊವಿಡ್ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ಶೇ.50ರಷ್ಟು ಜನರು ಸೇರಬಹುದು. ಆದರೆ ಸಾಮಾಜಿಕ, ಧಾರ್ಮಿಕ, ರಾಜಕೀಯ ರ್ಯಾಲಿ, ಧರಣಿ, ಸಮಾವೇಶ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ಮಾಧ್ಯಮಗಳು ತಿಳಿಸಿವೆ.


