ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ 6ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ತಹಶೀಲ್ದಾರ್ ಬೆದರಿಕೆ ಹಾಕಿ ದೌರ್ಜನ್ಯ ನಡೆಸಿದರೆಂಬ ಆರೋಪವಿದ್ದು ಅವರ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಪಿಸಿಆರ್ ಮೊಕದ್ದಮೆ ಹೂಡಿದ ಬಳಿಕ ತಹಶೀಲ್ದಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ 25-30 ವರ್ಷಗಳ ಹಿಂದಿನಿಂದಲೂ ಅಲೆಮಾರಿ ಕುಟುಂಬಗಳು ಪಟ್ಟಣಕ್ಕೆ ಸೇರಿದ ಗುಂಡುತೋಪಿನಲ್ಲಿ ವಾಸ ಮಾಡಿಕೊಂಡು ಬರುತ್ತಿವೆ. ಆದರೆ ತಾಲ್ಲೂಕು ಆಡಳಿತ ಪೊಲೀಸರನ್ನು ಮುಂದಿಟ್ಟುಕೊಂಡು ಅಲ್ಲಿಂದ ಖಾಲಿ ಮಾಡುವಂತೆ ಅಲೆಮಾರಿ ಕುಟುಂಬಗಳಿಗೆ ಬೆದರಿಕೆ ಹಾಕುತ್ತ ಬರುತ್ತಿದ್ದು ಅಲೆಮಾರಿಗಳ ಬದುಕು ಅತಂತ್ರವಾಗಿದೆ.

ಅಲೆಮಾರಿ ಕುಟುಂಬಗಳಿಗೆ ದಬ್ಬೇಘಟ್ಟದ ಸಮೀಪ ಕಾಡಿನಲ್ಲಿ ಜಾಗವನ್ನು ಗುರುತಿಸಲಾಗಿದ್ದು ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅಲ್ಲಿಗೆ ಹೋಗಲು ರಸ್ತೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಪರಿಸ್ಥಿತಿ ಹೀಗಿದ್ದರೂ ಅಲೆಮಾರಿ ಕುಟುಂಬಗಳನ್ನು ಅಲ್ಲಿಗೆ ಹೋಗುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ನಾಗಭೂಷಣ್ ಹಂದ್ರಾಳ್ ಆರೋಪಿಸಿದರು.

ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಅಲೆಮಾರಿಗಳು ಬದುಕು ಕಟ್ಟಿಕೊಳ್ಳುತ್ತಿದ್ದು ಅವರ ನೆರವಿಗೆ ತಾಲ್ಲೂಕು ಆಡಳಿತ ಬರುತ್ತಿಲ್ಲ. ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.
ನಿಮಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತೇವೆ. ಕಚೇರಿಗೆ ಬಂದು ಪರಿಹಾರದ ಚೆಕ್ ಪಡೆಯುವಂತೆ ಎಂದು ತಹಶೀಲ್ದಾರ್ ಭರವಸೆ ನೀಡಿದರು. ಆದ್ದರಿಂದ ಕಚೇರಿಗೆ ಬಂದರೆ ತಹಶೀಲ್ದಾರ್ ನಮ್ಮ ಕಡೆ ಗಮನಹರಿಸಲೇ ಇಲ್ಲ. ಸಾಂತ್ವನ ಹೇಳುವ ಬದಲಿಗೆ ಕಚೇರಿಗೆ ಬಂದ ನಾವು ತಹಶೀಲ್ದಾರ್ ನೀಡಿದ ಭರವಸೆಯನ್ನು ನೆನಪು ಮಾಡಿದೆವು. ಆಗ ತಹಶೀಲ್ದಾರ್ 107, 109 ಸೆಕ್ಷನ್ ಗಳಡಿ ರೌಡಿಶೀಟರ್ ಲೀಸ್ಟ್ ಗೆ ಹಾಕುವುದಾಗಿ ಬೆದರಿಕೆ ಹಾಕಿದರು ಎಂದು ಅಲೆಮಾರಿ ಕುಟುಂಬಗಳು ದೂರಿವೆ.

ದಬ್ಬೇಘಟ್ಟದ ಬಳಿ ಕಾಡಿನಲ್ಲಿ ನಿವೇಶನ ಗುರುತಿಸಲಾಗಿದೆ. ಕಾಡುಪ್ರಾಣಿಗಳು ರಾತ್ರಿ ವೇಳೆ ಸಂಚರಿಸುತ್ತವೆ. ಇದರಿಂದ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಅಲ್ಲಿಗೆ ಹೋಗುವುದಾದರೂ ಹೇಗೆ? ಅಷ್ಟೇ ಅಲ್ಲ, ಅಲ್ಲಿ ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಹೋಗುವುದಾದರೂ ಹೇಗೆ ಎಂದು ನೊಂದಿರುವ ಅಲೆಮಾರಿ ಕುಟುಂಬಗಳು ನೋವು ತೋಡಿಕೊಂಡಿವೆ.
ತಹಶೀಲ್ದಾರ್ ತೇಜಸ್ವಿನಿ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು ಕೆಸಿಎಸ್ಆರ್ ಪ್ರಕಾರ ಅವರನ್ನು ಅಮಾನತು ಮಾಡಬೇಕಿತ್ತು. ಮೊಕದ್ದಮೆ ಹೂಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಬೇಕಿತ್ತು. ಸಾಮಾನ್ಯನೊಬ್ಬನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾದ ಕೆಲ ಗಂಟೆಗಳಲ್ಲೇ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾದರೂ ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಿ ಬೇರೆ ಕಡೆ ವರ್ಗಾವಣೆ ಮಾಡಬೇಕಿತ್ತು. ಆದರೆ ಈ ಯಾವುದೇ ನಿಯಮಗಳನ್ನು ಪಾಲಿಸದೆ ಗಾಳಿಗೆ ತೂರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾಗಭೂಷಣ್ ಹಂದ್ರಾಳ್ ಆರೋಪಿಸಿದರು.


