ಒಮ್ಮೆ ಕೃಷ್ಣಗಿರಿಯಿಂದ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಅಮ್ಮ ನಾನು ಹೊರಟೆವು. ದಾರಿಯಲ್ಲಿ ಸಿಕ್ಕ ಹಿರಿಯರು ‘ನರಸಮ್ಮ ವೀಳ್ಯದೆಲೆ ಇದ್ರೆ ಕೊಡು’ ಎನ್ನುತ್ತಿದ್ದರು. ಆಗ ನಾಲ್ಕೈದು ಪದರ ಇರುವ ಅಡಿಕೆಲೆ ಚೀಲದಿಂದ ಒಂದು ಬೆಟ್ಟಿನಷ್ಟು ಅಳತೆ ಹಾಕಿ ಎಲೆ ಹರಿದು ಕೊಡುತ್ತಿದ್ದಳು. ಎಲೆ ಬೆಟ್ಟಿನಗಲ ಇರುವುದನ್ನು ನೋಡಿ ‘ಇದೇನಮ್ಮ ಹಲ್ಲಿಗೂ ಸಿಕ್ಕಲ್ಲ ಅಷ್ಟೇ ಅಷ್ಟು ಕೊಟ್ಟಿದ್ದೀಯಾ’ ಅಂದ್ರೆ, ಅಮ್ಮ ‘ಅದೇ ಇರೋದು ನನಗೂ ಹಗಲೆಲ್ಲ ಬೇಕಲ್ಲ’ ಎಂದು ಮುಂದೆ ನಡೆಯುತ್ತಿದ್ದಳು.
ಅರ್ಧ ಕಿಲೋ ಮೀಟರ್ ದೂರದಲ್ಲೇ ಇರುವ ಮಾಳಿಗೆ ಹಟ್ಟಿಯನ್ನು ಎಡಭಾಗಕ್ಕೆ ಸರಿಸಿ ನಾವು ಕೆರೆ ಅಂಗಳದ ಮೂಲಕ ಹೊಸಬಾವಿ ಕಡೆಗೆ ಹೋಗುತ್ತಿದ್ದೆವು. ಹೊಸಬಾವಿಗೆ ಕೂಗಳತೆ ದೂರದಲ್ಲಿ ಒಂದು ದೊಡ್ಡ ಮುತ್ತುಗದ ಮರ ಇತ್ತು. ಅದನ್ನು ಹತ್ತಿಯೇ ಎಲೆಗಳನ್ನು ಮುರಿದು ಕೆಳಕ್ಕೆ ಹಾಕಬೇಕಿತ್ತು. ಆ ಮರಕ್ಕೆ ನನ್ನನ್ನು ಹತ್ತಲು ಬಿಡದೆ ಅಮ್ಮ ತಾನೇ ಹತ್ತಿ ಮುತ್ತುಗದ ಎಲೆ ಮುರಿದು ಕೆಳಕ್ಕೆ ನಾನಿರುವ ಕಡೆಗೆ ಎಸೆಯುತ್ತಿದ್ದಳು. ನಾನು ಚಲ್ಲಾಪಿಲ್ಲಿಯಾಗಿ ಬೀಳುತ್ತಿದ್ದ ಎಲೆಗಳನ್ನು ಆಯ್ದು ಗೋಣಿ ಚೀಲಕ್ಕೆ ತುಂಬುತ್ತಿದ್ದೆ.
ಅಂದು ಅಮ್ಮ ಮುತ್ತುಗದ ಮರ ಏರಿದ್ದಳು. ಮರದ ಸುತ್ತಲೂ ರೋಜಿ ಗಿಡಗಳು ಬೆಳೆದು ನಿಂತಿದ್ದವು. ಪಶ್ಚಿಮ ದಿಕ್ಕಿನ ಕಡೆಗೆ ರೋಜಿ ಗಿಡ ಇಲ್ಲದೆ ಬೀಳಂತೆ ಕಂಡುಬರುತ್ತಿತ್ತು. ಮುತ್ತುಗದ ಮರ ಹತ್ತಿದ್ದ ಅಮ್ಮ ಹೇಗೋ ಜಾರಿ ಬಿದ್ದಿದ್ದಳು. ರೋಜಿ ಗಿಡದ ಮೇಲೆ ಬಿದ್ದಿದ್ದರಿಂದ ತರಚಿದ ಗಾಯಗಳು ಆಗಿದ್ದವು. ಮರದಿಂದ ಬೀಳುವುದೇ ತಡ ನಾನು ನೋಡುವ ಹೊತ್ತಿಗೆ ರೋಜಿಯ ಪೊದೆಯಿಂದ ಹೊರಬಂದಿದ್ದಳು. ‘ಏನಾಯ್ತಮ್ಮ’ ಎಂದು ಕೇಳಿದೆ. ‘ಏನೂ ಇಲ್ಲ, ನಡಿ ಬೇರೆ ಕಡೆಹೋಗಾನ. ಯಾಕೋ ಬಂದಿದ್ ಗಳ್ಗೆ ಸರಿ ಇಲ್ಲ, ಅಂದವಳು ಸರಸರನೇ ನಡೆದುಬಿಟ್ಟಳು. ನಾನು ಏನು ಅರಿಯದವನಂತೆ ಅಮ್ಮ ಹೆಜ್ಜೆ ಹಾಕಿದ ಕಡೆಗೆ ಹೊರಟೆ. ಬಾಲಪ್ಪ ಕುಂಟೆಯಲ್ಲಿ ಒಂದಷ್ಟು ಮುತ್ತುಗದ ಎಲೆಗಳನ್ನು ಮುರಿದುಕೊಂಡ ಗೋವಿಂದಪ್ಪನ ಜಬ್ಲು ಕಡೆಗೆ ಹೋದೆವು.
ಬೋರಪ್ಪ, ಕೆಂಪಣ್ಣ, ಸಂಜೀವಪ್ಪ ಮೊದಲಾದವರ ಹೊಲಗಳನ್ನು ಅಡರು ತುಳಿದುಕೊಂಡು ಕನ್ನಮೇಡಿ ಬೆಟ್ಟದ ಕಡೆಗೆ ಹೆಜ್ಜೆ ಹಾಕುತ್ತ ಹೊಲದ ಬದುಗಳಲ್ಲಿ ಬೆಳೆದಿದ್ದ ಮುತ್ತುಗದ ಎಲೆಗಲನ್ನು ಬಿಡಿಸಿಕೊಂಡು ಹೋಗುತ್ತಿರುವಾಗಲೇ ನನಗೆ ‘ಅಮ್ಮ ಮರದಿಂದ ಬಿದ್ದು ಏನೂ ಆಗಿಲ್ಲವೆಂಬಂತೆ ನಡೆಯುತ್ತಿದ್ದರೆ ಅಮ್ಮ ಎಷ್ಟು ಗಟ್ಟಿಗಿತ್ತಿ ಎಂದುಕೊಂಡಿದ್ದೆ’. ಅಮ್ಮನ ಹೆಜ್ಜೆಗಳನ್ನೇ ನಾನು ಹಿಂಬಾಲಿಸಿ ನಡೆಯುತ್ತಿದ್ದೆ. ಮುತ್ತುಗದ ಎಲೆ ಮುರಿಯುವವರಿಗೆ ದಾರಿಯೇ ಬೀಕಿಲ್ಲ. ಅಡ್ಡಡ್ಡ ತುಳಿದುಕೊಂಡು ಹಾವು ಹರಿದಾಡುವ ರೀತಿಯಲ್ಲಿ ನಾವು ಹೋಗುತ್ತಿದ್ದೆವು. ಬೇಸಿಗೆಯ ಬಿಸಿಲು ನಮ್ಮನ್ನು ಸುಡುತ್ತಿತ್ತು. ಬರೀ ಕಾಲಲ್ಲಿ ನಡೆಯುತ್ತಿದ್ದರೆ ಅಂಗಾಲು ಬೆಂಕಿಯಲ್ಲಿ ಸುಟ್ಟ ಅನುಭವ ಆಗುತ್ತಿತ್ತು. ಹೀಗೆ ಮನಸ್ಸಿನೊಳಗೆ ಅಂದುಕೊಳ್ಳುತ್ತಿರುವಾಗಲೇ ಕುಂಟಗೋವಿಂದ ಜಬ್ಬಲು ದಾಟಿ ಕೃಷ್ಣಪ್ಪನ ಮಾವಿನ ತೋಪು ಹತ್ತಿರಕ್ಕೆ ಬಂದಿದ್ದೆವು.
ಮಾದಯ್ಯಗುಟ್ಟೆ ಪಶ್ಚಿಮಕ್ಕೆ ಇದ್ದರೆ, ದಕ್ಷಿಣಕ್ಕೆ ಕನ್ನಮೇಡಿ ಬೆಟ್ಟ, ಸಳಿಬೋಧು ಕಾಣುತ್ತಿತ್ತು. ಕೃಷ್ಣಪ್ಪನ ತೋಪಿನ ಬಳಿಯ ಹೊಲಗಳಲ್ಲಿ ಸಣ್ಣಸಣ್ಣ ಮುತ್ತುಗದ ಗಿಡಗಳು ನೆಲದಲ್ಲೇ ಹರಡಿಕೊಂಡು ಎಲೆ ಮುರಿಯಲು ಅನುಕೂಲವಾಗುತ್ತಿತ್ತು. ಹೀಗೆ ಹೊಲದಲ್ಲಿ ಹೋಗುತ್ತಿರುವಾಗ ಹಂಚಿಕಡ್ಡಿಯನ್ನು ಮುರಿದುಕೊಂಡು ಹೋಗುತ್ತಿದ್ದೆವು. ಅಮ್ಮ ಯಾವುದೇ ಹೆದರಿಕೆ ಇಲ್ಲದೆ ಮುತ್ತುಗದ ಎಲೆಗಾಗಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು.
ಅಮ್ಮ ಮುತ್ತುಗದ ಮರದಿಂದ ಬಿದ್ದ ರಾತ್ರಿಗೆ ನಿದ್ರೆ ಮಾಡಲಿಲ್ಲ. ಯಾಕೋ ನಿದ್ದೆ ಬರುತ್ತಿಲ್ಲ ಅಂದಿದ್ದಳು. ಜ್ವರವೂ ಬಂದಿತ್ತು. ಅಪ್ಪ ರಾತ್ರಿ ಊಟಕ್ಕೆ ಕುಳಿತಾಗ ‘ಯಾಕೋ ನಿಮ್ಮಮ್ಮ ಮಲಗವ್ಳೆ, ಏನಾಯ್ತು’ ಅಂತ ಕೇಳಿದ. ಸತ್ಯ ಹೇಳಿದರೆ ಅಮ್ಮನಿಗೆ ಅಪ್ಪ ಬೈಯ್ಯಬಹುದೆಂದು ನಾನು ಮೌನಕ್ಕೆ ಜಾರಿದೆ. ಅಮ್ಮನಿಗೆ ಜ್ವರ ಬಂದಿರುವುದನ್ನು ತನ್ನ ಅಕ್ಕನಿಂದ ತಿಳಿದುಕೊಂಡ ಅಪ್ಪ ಹೊಗೇಟು ಹಾಕುವಂತೆ ಹೇಳಿ ಗುಡಿಸಲು ಮನೆಯೊಳಗಿಂದ ಅಂಗಳದಲ್ಲಿ ಹೋಗಿ ಕುಳಿತಿದ್ದ. ನಾನು ಬೇವಿನ ಎಲೆ, ಕಾಸಿತೆನೆ, ಕಕ್ಕೆ ಸೊಪ್ಪು, ಬದನಿಕೆ, ಬೆಳ್ಳುಳ್ಳಿ ಸಿಪ್ಪೆ ಹಾಕಿ ಅಮ್ಮನಿಗೆ ರಗ್ಗು ಹೊದ್ದುಕೊಂಡು ಹೊಗೇಟು ಬಾಯಿಗೆ ಎಳೆದುಕೊಳ್ಳುವಂತೆ ಹೇಳಿ ಸ್ವಲ್ಪ ಹೊತ್ತು ಆದ ಮೇಲೆ ಹೊಗೇಟನ್ನು ಮನೆಯ ಮುಂದಿದ್ದ ಕಳ್ಳೆ (ಬೇಲಿ) ಪಕ್ಕಕ್ಕೆ ಹಾಕಿ ಬೆಂಕಿಕೆಂಡಗಳಿಗೆ ನೀರು ಹೊಯ್ದು ಆರಿಸಿ ಬಂದಿದ್ದೆ.
(ಮುಂದುವರೆಯಲಿದೆ)
ಕೆ.ಈ.ಸಿದ್ದಯ್ಯ