ರಾಯಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಡಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪೋಟೋ ತೆಗೆಸಿದ ನಂತರವೇ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜಿನ ಗೌಡ ಧ್ವಜಾರೋಹಣ ನಡೆಸಿದ್ದಾರು. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ಮತ್ತು ಖಂಡನೆ ವ್ಯಕ್ತವಾಗಿದೆ.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಪೋಟೋದ ಜೊತೆಗೆ ಸಂವಿಧಾನಶಿಲ್ಪಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಇಡಲಾಗಿತ್ತು. ಅಲ್ಲಿಗೆ ಆಗಮಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಬಾಬಾ ಸಾಹೇಬರ ಭಾವಚಿತ್ರವನ್ನು ತೆಗೆಯುವಂತೆ ಪಟ್ಟು ಹಿಡಿದರು ಎಂದು ಹೇಳಲಾಗಿದೆ.
ಈ ಘಟನೆಯನ್ನು ಸ್ಥಳದಲ್ಲೇ ವಿರೋಧಿಸಿದ ಪರಿಶಿಷ್ಟ ಜಾತಿ ಮತ್ತು ಇತರೆ ವರ್ಗಗಳ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಧ್ವಜಾರೋಹಣ ಕಾರ್ಯಕ್ರಮವನ್ನು ವಿರೋಧಿಸಿ ಹೊರನಡೆದರು ಎಂದು ತಿಳಿದು ಬಂದಿದೆ.
ಸಾಹಿತಿ, ಚಿಂತಕ ಡಾ.ರಹಮತ್ ತರೀಕೆರೆ ಫೇಸ್ ಬುಕ್ ನಲ್ಲಿ ಬಾಬಾಸಾಹೇಬರು ರಚಿಸಿದ ಸಂವಿಧಾನದಡಿಯಲ್ಲಿ, ನ್ಯಾಯದಾನ ಮಾಡುವ ಮತ್ತು ಅಧಿಕಾರ ನಿರ್ವಹಿಸುವ ಸಾರ್ವಜನಿಕ ಸ್ಥಳಗಳಲ್ಲಿ, ದಲಿತರನ್ನು ಮಹಿಳೆಯರನ್ನು ಮುಸ್ಲಿಮರನ್ನು ಬುಡಕಟ್ಟುಗಳನ್ನು ಕುರಿತು ಹೆಪ್ಪುಗೊಂಡಿರುವ ಘೋರ ಅಸಹನೆಯ ಒಂದು ಚಿಕ್ಕ ಪ್ರತಿನಿಧಿ ರಾಯಚೂರಿನ ಸದರಿ ಮಾನ್ಯ ನ್ಯಾಯಾಧೀಶರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯ ಕ್ಷೇತ್ರದಲ್ಲಿ ಢಾಳಾಗಿ ನೆಲೆಗೊಂಡಿರುವ ಸಾಮಾಜಿಕ-ಧಾರ್ಮಿಕ ದ್ವೇಷಭಾವದ ಬಗ್ಗೆ ನನ್ನ ವಕೀಲ ಮಿತ್ರರ ಅನುಭವಗಳನ್ನು ಕೇಳಿರುವೆ. ನ್ಯಾಯಾಧೀಶರಾಗಿದ್ದ ಕೋಚೆಯವರೂ ಇಂತಹ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಗಾಬರಿಯಾಗುತ್ತದೆ. ದುಗುಡವಾಗುತ್ತದೆ. ಅಂಬೇಡ್ಕರ್ ಅವರು “ಸಾಮಾಜಿಕ ಆರ್ಥಿಕ ಅಸಮಾನತೆ ಇರುವ ಸಮಾಜದಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ” ಎಂದಿದ್ದು ಇದಕ್ಕಾಗಿಯೇ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


