ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಸರ್ಕಾರ ಪ್ರತಿಭಟನಾನಿರತ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿ ಪರಿಹರಿಸಲು ಸಮಿತಿಯನ್ನು ರಚಿಸಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕಾನೂನು ಉಲ್ಲಂಘಿಸದಂತೆ ವಿದ್ಯಾರ್ಥಿಗಳೀಗೆ ಮನವಿ ಮಾಡಿದ್ದು ಕುಂದು ಕೊರತೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ವಿನಂತಿಸಿರುವ ಸಚಿವರು ಪ್ರತಿಭಟನಾಕಾರರು ಎತ್ತಿರುವ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ರೈಲ್ವೆ ನೇಮಕಾತಿ ಮಂಡಳಿಯ ಅಧ್ಯಕ್ಷರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳನ್ನು ಸಂಗ್ರಹಿಸಲು ಕೇಳಿಕೊಳ್ಳಲಾಗಿದೆ. ಜೊತೆಗೆ ಸಮಿತಿ ದೇಶದ ವಿವಿಧ ಭಾಗಗಳಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಲಿದೆ ಎಂದರು.
ಗಯಾದಲ್ಲಿ ಪ್ರತಿಭಟನಾನಿರತರು ರೈಲಿಗೆ ಬೆಂಕಿ ಹೊತ್ತಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಡುವಂತೆ ಆಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಎನ್.ಡಿಟಿವಿ ವರದಿ ಮಾಡಿದೆ.
ಪ್ರತಿಭಟನಾಕಾರರು ರೈಲ್ವೆ ಅಳಿಗಳ ಮೇಲೆ ಕುಳಿತು ಸಾರ್ವಜನಿಕರ ಆಸ್ತಿಯನ್ನು ಧ್ವಂಸ ಮಾಡಿದ್ದಾರೆ. ಭದ್ರತಾ ಪಡೆಗಳ ಜತೆ ಮಾತಿಗೆ ಮಾತು ಬೆಳೆದಿದ್ದ ಸಂಘರ್ಷಕ್ಕೆ ಕಾರಣವಾಯಿತು ಎಂದು ತಿಳಿಸಿದೆ.
ಪ್ರತಿಭಟನಾಕಾರರು ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸುವ ರೈಲ್ವೆಯ ನಿರ್ಧಾರವನ್ನು ವಿರೋಧಿಸಿದ್ದಾರೆ. ಮೊದಲ ಹಂತದಲ್ಲಿ ತೇರ್ಗಡೆಯಾದವರಿಗೆ ಎರಡನೇ ಹಂತದಲ್ಲಿ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.


