ಮೆಕ್ಸಿಕೊ ಸಿಟಿಯ ಜೈಲಿನ ಕಸದಲ್ಲಿ ಸತ್ತ ಶಿಶುವೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಮತ್ತು ಜೈಲು ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಶಿಶುವಿನ ಸತ್ತದೇಹವನ್ನು ಹೇಗೆ ಸ್ಥಳಾಂತರಿಸಲಾಯಿತು ಮತ್ತು ಅಸಾಮಾನ್ಯ ಪ್ರಕರಣದ ಹಿಂದಿನ ಉದ್ದೇಶಗಳೇನು ಎಂಬ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದು, ಶಿಶು ದೇಹ ಕಸದಲ್ಲಿ ಪತ್ತೆಯಾಗಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮೆಕ್ಸಿಕೊ ಸಿಟಿಗೆ 130 ಕಿಲೋ ಮೀಟರ್ ದೂರದಲ್ಲಿರುವ ಪ್ಯೂಬ್ಲಾ ರಾಜ್ಯದ ಜೈಲಿನ ಕಸದ ಕಂಟೈನರ್ ನಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹುಡುಕುತ್ತಿರುವ ಸಮಯದಲ್ಲಿ ಕೈದಿಯೊಬ್ಬರಿಗೆ ಮೃತ ದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಇದು ಒಂದು ವಿಲಕ್ಷಣ ಪ್ರಕರಣ ಮತ್ತು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಯಾವುದೇ ದಾಖಲೆಗಳಿಲ್ಲ ಎಂದು ಮೆಕ್ಸಿಕೊ ಸಿಟಿ ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರ ಯುಲಿಸೆಸ್ ಲಾರಾ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಜೈಲಿನಲ್ಲಿ ಮೇಲ್ವಿಚಾರಕರು ಮತ್ತು ಕಾವಲುಗಾರರು ಸೇರಿ 23 ಶಂಕಿತರಿಗೆ ವಾರಂಟ್ ಹೊರಡಿಸಿದ ನಂತರ ಇದುವರೆಗೆ 21 ಜನರನ್ನು ಬಂಧಿಸಲಾಗಿದೆ ವ್ಯೂಬ್ಲಾ ಗವರ್ನರ್ ಮಿಗುಯೆಟ್ ಚಾರ್ಬೋಸಾ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದೆ.
ಪ್ರತಿಸ್ಪರ್ಧಿ ಕ್ರಿಮಿನಲ್ ಗ್ಯಾಂಗ್ ಗಳ ಸದಸ್ಯರ ಉಪಸ್ಥಿತಿಯಿಂದ ಮೆಕ್ಸಿಕನ್ ಜೈಲುಗಳು ಅಪರಾಧ ಮತ್ತು ಹಿಂಸಾಚಾರದಿಂದ ತುಂಬಿವೆ. ಮಂಗಳವಾರ ಪಶ್ಚಿಮ ರಾಜ್ಯ ಕೊಲಿಮಾದ ಜೈಲಿನಲ್ಲಿ ಕೈದಿಗಳ ನಡುವೆ ಘರ್ಷಣೆ ನಡೆದು ಎಂಟು ಮಂದಿ ಸಾವನ್ನಪ್ಪಿದ್ದರು. ಏಳು ಮಂದಿ ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


