ಭಾರತದ ಅತ್ಯಂತ ಎತ್ತರ ಮನುಷ್ಯನೆಂದು ಹೇಳಿಕೊಳ್ಳುವ ಧರ್ಮೇಂದ್ರ ಪ್ರತಾಪ್ ಸಿಂಗ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಉತ್ತರ ಪ್ರದೇಶದ ಧರ್ಮೇಂದ್ರ ಪ್ರತಾಪ್ ಸಿಂಗ್ 8 ಅಡಿ 1 ಇಂಚು ಎತ್ತರದ ವ್ಯಕ್ತಿಯಾಗಿದ್ದು ಯಾವುದೇ ಸಮಾರಂಭದಲ್ಲಿ ಭಾಗಿಯಾದರೂ ಜನರ ನಡುವೆ ಎದ್ದು ಕಾಣುತ್ತಾರೆ. ಅವರ ಸುತ್ತಲಿನ ಜನರನ್ನು ಕುಬ್ಜಗೊಳಿಸುತ್ತಾರೆ ಮತ್ತು ವಿಸ್ಮಯಗೊಳಿಸುತ್ತಾರೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಅತ್ಯಂತ ಎತ್ತರದ ವ್ಯಕ್ತಿ ಎಂದು ಹೇಳಿಕೊಳ್ಳುವ ಮಾಜಿ ಈವೆಂಟ್ ಮ್ಯಾನೇಜರ್ ಧರ್ಮೇಂದ್ರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡು ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವರು ಮತದಾರರ ಗಮನ ಸೆಳೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಾನು ಪಕ್ಷವನ್ನು ಎತ್ತರಕ್ಕೆ ಕೊಂಡೊಯ್ಯಲು ಮತ್ತು ನನ್ನ ವಿರೋಧಿಗಳ ಬಲವನ್ನು ಕುಬ್ಜಗೊಳಿಸಲು ನಾನು ಕೆಲಸ ಮಾಡುತ್ತೇನೆ. ಹಲವು ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ಸ್ಥಾನಮಾನ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಪಕ್ಷದಿಂದ ನನಗೆ ವಹಿಸಿರುವ ಜವಾಬ್ದಾರಿಗಳನ್ನು ನನ್ನ ಕೈಲಾದ ಮಟ್ಟಿಗೆ ನಿರ್ವಹಿಸುತ್ತೇನೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಭೈಯ್ಯಾ ಪರ ಪ್ರಚಾರ ಮಾಡಲು ಪಕ್ಷವು ನನ್ನನ್ನು ಕೇಳಿದರೆ ನಾನು ಕರ್ಹಾಲ್ ಬಳಿಗೆ ಹೋಗಿ ಅವರಿಗೆ ಮತ ನೀಡುವಂತೆ ಕೇಳುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಪಕ್ಷವು ಯಾರಿಗೂ ತಾರತಮ್ಯ ಮಾಡುವುದಿಲ್ಲ. ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವುದರಿಂದ ಸಮಾಜವಾದಿ ಪಕ್ಷಕ್ಕೆ ಸೇರಿದ್ದೇನೆ. ಸಮಾಜವಾದಿ ಪಕ್ಷದಲ್ಲಿ ಕ್ರಿಮಿನಲ್ ಗಳು ಮತ್ತು ಮಾಫಿಯಾ ಅಂಶಗಳಿದ್ದರೆ ಅದನ್ನು ನಿರ್ಧಿಷ್ಟವಾಗಿ ಹೇಳಬೇಕು ಎಂದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಬೇಡವೇ ಎಂಬುದನ್ನು ಪಕ್ಷದ ಅಧ್ಯಕ್ಷರು ನಿರ್ಧರಿಸುತ್ತಾರೆ. ಸದ್ಯ ನಾನು ಈಗಷ್ಟೇ ಪಕ್ಷಕ್ಕೆ ಸೇರಿದ್ದೇನೆ. ನನಗೆ ಟಿಕೆಟ್ ನೀಡಿದರೆ ಖಂಡಿತವಾಗಿಯೂ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


