ಚಿಕ್ಕಪ್ಪನ ಸೆಲ್ ಫೋನ್ ಕದ್ದ ಆರೋಪದ ಮೇಲೆ ಪೊಲೀಸರು ಹಲ್ಲೆ ನಡೆಸಿದ ನಾಲ್ಕು ದಿನಗಳ ನಂತರ ಉತ್ತರ ಪ್ರದೇಶದ ಲಖಿಂಪುರದಲ್ಲಿ 17 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಲಕ್ನೋದಿಂದ 230 ಕಿಲೋ ಮೀಟರ್ ದೂರದ ಸಂಪೂರನಾ ನಗರದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಮೂವರು ಪೊಲೀಸರು, ಸಬ್ ಇನ್ಸ್ ಪೆಕ್ಟರ್ ಮತ್ತು ಇಬ್ಬರು ಕಾನ್ ಸ್ಟೆಬಲ್ ಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.
ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಬಾಲಕನ ವಿಚಾರಣೆ ನಡೆಸಲಾಗಿದ್ದು ಕುಟುಂಬವು ಮೊದಲ ಹಲ್ಲೆಗೆ ತನ್ನ ಚಿಕ್ಕಪ್ಪನನ್ನು ದೂಷಿಸಿದೆ. ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದೆ ಎಂದು ಹೇಳಲಾಗಿದೆ.
ಜನವರಿ 17ರಂದು ಬಾಲಕ ಚಿಕ್ಕಪ್ಪನ ಪೋನ್ ಕದ್ದಿದ್ದ ಎಂದು ಆರೋಪಿಸಲಾಗಿತ್ತು. ಈ ದೂರಿನ ಮೇರೆಗೆ 19ರಂದು ಬಾಲಕನ ಕುಟುಂಬ ಮತ್ತು ಗ್ರಾಮದ ಮುಖಂಡರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಎಸ್.ಪಿ. ಸಂಜೀವ್ ಸುಮನ್ ಹೇಳಿದ್ದಾರೆ.
ಪೊಲೀಸರ ಹಲ್ಲೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


