ಪಂಜಾಬ್ ವಿಧಾನಸಭಾ ಚುನಾವಣೆಗೂ ಮೊದಲು ತಮ್ಮ ಸಂಪುಟದ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಲು ಹೊರಟಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇಂದ್ರ ಸರ್ಕಾರ ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿಸಿಕೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದರು.
ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಗೆ ಹೆದರುವುದಿಲ್ಲ. ನಮ್ಮ ಸಚಿವರು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಿಂದ ಪರಿಹಾರ ಪಡೆಯುತ್ತಾರೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕರು ಹೇಳಿದ್ದಾರೆ.
ಜೈನ್ ಅಥವಾ ಪಕ್ಷದ ಯಾರನ್ನಾದರೂ ಬಂಧಿಸಲು ಇಡಿ ಅಥವಾ ಸಿಬಿಐನಂತಹ ಯಾವುದೇ ಏಜೆನ್ಸಿಯನ್ನು ಕಳಿಸಲಿ ಎಂದು ಅರವಿಂದ್ ಕೇಜ್ರಿವಾಲ್ ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಆರೋಗ್ಯ ಮತ್ತು ಇತರೆ ಖಾತೆಗಳನ್ನು ಹೊಂದಿರುವ ಜೈನ್ ಅವರು ಇಡಿ, ಸಿಬಿಐ ಅಥವಾ ಯಾವುದೇ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಹೆದರುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಬಿಜೆಪಿಯ ಹಳೆಯ ತಂತ್ರ, ಚುನಾವಣೆಯಲ್ಲಿ ಸೋಲುವ ಭೀತಿ ಇರುವ ಕಾರಣಕ್ಕಾಗಿ ನಮ್ಮ ಮೇಲೆ ಬೇಟೆಯಾಡಲು ಕೇಂದ್ರೀಯ ಸಂಸ್ಥೆಗಳನ್ನು ಕಳಿಸುತ್ತಿದೆ ಎಂದು ಜೈನ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಪಂಜಾಬ್ ನಲ್ಲಿ ಫೆಬ್ರವರಿ 20ರಂದು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮಾರ್ಚು 11ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೂ ಮೊದಲೇ ಜೈನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.


