ತುಮಕೂರಿನ ಬಿ.ಎಚ್.ರಸ್ತೆಯ ಸಿದ್ದಗಂಗಾ ಆಸ್ಪತ್ರೆ ಎದುರಿಗೆ ಇದ್ದ ಸುಮಾರು 10ಕ್ಕೂ ಹೆಚ್ಚು ಬೇವಿನ ಮರಗಳನ್ನು ಕತ್ತರಿಸಿ ಹಾಕಿರುವ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಸ್ತೆಯ ನಡುವಿನ ವಿಭಜಕದಲ್ಲಿ ಕಳೆದ 5-6 ವರ್ಷಗಳ ಹಿಂದೆಯೇ ಬೇವಿನ ಸಸಿಗಳನ್ನು ನಡೆಲಾಗಿತ್ತು. ಆ ಗಿಡಗಳು ಚನ್ನಾಗಿ ಬೆಳೆದಿದ್ದವು. ಜಾಹಿರಾತು ಕಾಣುವುದಿಲ್ಲ ಎಂಬ ನೆಪವೊಡ್ಡಿ ಬೇವಿನ ಗಿಡಗಳನ್ನು ಕತ್ತರಿಸಿ ಹಾಕಿರುವುದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ದೇಶಾದ್ಯಂತ ಆಕ್ಸಿಜನ್ ಗೆ ಕೊರತೆ ಇದೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಇದರ ನಡುವೆಯೇ ಜನರಿಗೆ ಒಳ್ಳಯ ಗಾಳಿಯನ್ನು ನೀಡುವ ಔಷಧಿ ಗಿಡಗಳನ್ನು ಕತ್ತರಿಸಿ ಹಾಕಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಬೇವು ಸೇರಿ ಇತರೆ ಗಿಡಳನ್ನು ಕತ್ತರಿಸಿ ಹಾಕಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ ಪರಿಸರಕ್ಕೆ ಹಾನಿ ಮಾಡುವಂತಹ ಜಾಹಿರಾತುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ದೆಹಲಿಯನ್ನು ನೋಡಿದರೆ ಪರಿಸರ ಹದಗೆಟ್ಟಿರುವ ಚಿತ್ರಣ ನಮ್ಮ ಕಣ್ಣಮುಂದೆ ಬರುತ್ತದೆ. ಕೊರೊನಕ್ಕೆ ಆಕ್ಸಿಜನ್ ಬೇಕು ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿತ್ಯವೂ ಬೊಬ್ಬೆ ಹೊಡೀತಾರೆ. ಆದರೆ ಆಕ್ಸಿಜನ್ ನೀಡುವ ಗಿಡಗಳನ್ನು ಕಡಿಯಬಾರದು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು. ಕಾಡಿನಲ್ಲಿ ಬಡವನೊಬ್ಬ ಪ್ರಾಣಿಯನ್ನು ಕೊಂದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೆ ಬೇವಿನ ಗಿಡಗಳನ್ನು ಕತ್ತರಿಸಿ ಹಾಕಿದ್ದಾರಲ್ಲ, ಅವರಿಗೆ ಯಾವ ಶಿಕ್ಷೆ ನೀಡಬೇಕು ಎಂದು ಕೇಳಿದರು.
ಬೇವಿನ ಗಿಡಗಳನ್ನು ಕತ್ತರಿಸುವುದರ ಉದ್ದೇಶ ಜಾಹಿರಾತು ಕಾಣಲಿ ಎಂಬುದು. ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ಶಾಮೀಲಾಗಿದ್ದಾರೆ. ಬೇವಿನ ಸಸಿಗಳನ್ನು ನೆಡುವುದೇನು ನಂತರ ಕತ್ತರಿಸುವುದೇನು? ಹೀಗೆ ಮುಂದುವರೆದರೆ ನಾವು ಜೈಲಿಗೆ ಹೋಗಲೂ ಸಿದ್ದ ಎಂದು ಸೊಗಡು ಶಿವಣ್ಣ ಎಚ್ಚರಿಕೆ ನೀಡಿದರು.


