ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ ಮತ್ತು ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ? ಆ ಯೋಗ್ಯತೆ ಅವರಿಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಕಮೀಷನ್ ವ್ಯವಹಾರದಲ್ಲಿ ನಾನು ನೀಟ್, ಕ್ಲೀನ್ ಎನ್ನುತ್ತಿದ್ದಾರೆ ಪ್ರತಿಪಕ್ಷ ನಾಯಕರು. ಐದು ವರ್ಷ ಸಿಎಂ ಆಗಿದ್ದರೂ ನಾನು ಕ್ಲೀನ್ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಇವತ್ತಿಗೂ ಕೇಳಿಸುತ್ತಿರುವ ಅರ್ಕಾವತಿ ಆರ್ತನಾದಕ್ಕೆ ಕಾರಣರು ಯಾರು? ಎಂದು ಪ್ರಶ್ನಿಸಿದ್ದಾರೆ.
ಈ ಸತ್ಯ ಆಚೆ ಬಿದ್ದರೆ ಆ ಸಿದ್ದಹಸ್ತರು ಮುಖವನ್ನು ಎಲ್ಲಿ ಇಟ್ಟುಕೊಳ್ಳುತ್ತಾರೆ? ದೇವರಾಜ ಅರಸು ಅವರ ನಂತರ ಐದು ವರ್ಷದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಅಪರ ಸಿದ್ದಪುರುಷರ ಪಾಡೇನು? ಐದು ವರ್ಷದ ಮುಖ್ಯಮಂತ್ರಿ ಎಂಬ ಪ್ರಭಾವಳಿಯ ಕಥೆ ಏನು? ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ಅಕ್ಕಪಕ್ಕದವರ ತಟ್ಟೆಯಲ್ಲಿರುವುದನ್ನು ಎಗರಿಸುವುದು ಸಿದ್ಧಾಂತವೇ? ಆಪರೇಷನ್ ಹಸ್ತವೂ ಸಿದ್ಧಾಂತವೇ? ಆಶ್ರಯ ಕೊಟ್ಟ ಪಕ್ಷವನ್ನು, ಅಲ್ಲಿನ ಮೂಲನಿವಾಸಿಗಳನ್ನು ಮುಗಿಸುವುದೇ ಸಿದ್ಧಾಂತವೇ? ನೀವು ಜೆಡಿಎಸ್ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ? ನಾಚಿಕೆಯಾಗಬೇಕು ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಳ್ಳು ನಿಮ್ಮ ರಾಜಕೀಯದ ಅಡಿಪಾಯ. ಸುಳ್ಳೇ ನಿಮ್ಮ ರಾಜಕೀಯ ಅಸ್ತಿತ್ವದ ಪ್ರತೀಕ. ಸುಳ್ಳು ಸುಳ್ಳೇ ನಿಮ್ಮ ನರಿಬುದ್ಧಿ ಅವಕಾಶವಾದಿ ರಾಜಕಾರಣ ನಿಜಸ್ವರೂಪ ಎಂದು ಲೇವಡಿ ಮಾಡಿದ್ದಾರೆ.