ಜನಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಮೊದಲು ಕ್ರಮ ಕೈಗೊಂಡು ಆದಾಯ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲಾಕ್ ಡೌನ್, ಸೀಲ್ ಡೌನ್ ನಿರ್ಬಂಧ ಹೇರಿದೆ. ಸೋಂಕು ಪ್ರಮಾಣ ಕಡಿಮೆ ಇದ್ದಾಗ ಕರ್ಫ್ಯೂ ವಿಧಿಸಿದ್ದವರು, ಸೋಂಕು ಪ್ರಮಾಣ ಹೆಚ್ಚಾದಾಗ ಕರ್ಫ್ಯೂ ಹಿಂಪಡೆದಿದ್ದಾರೆ. ರಾಜಕೀಯ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ದೂರಿದರು.
ಹಾಲಿನ ದರ, ವಿದ್ಯುತ್ ದರ ಹೆಚ್ಚಿಸುತ್ತಿದ್ದಾರೆ. ರೈತನಿಗೆ ತೊಂದರೆ ಆದಾಗ ಅವರ ರಕ್ಷಣೆಗೆ ಸರ್ಕಾರ ಯಾಕೆ ನಿಲ್ಲಲಿಲ್ಲ? ಬೆಳೆ ದರ ಏಕೆ ಹೆಚ್ಚಿಸಲಿಲ್ಲ? ಬೆಂಬಲ ಬೆಲೆ ಯಾಕೆ ನೀಡಲಿಲ್ಲ. ಏರಿಕೆಯಾಗಿರುವ ಕಬ್ಬಿಣ, ಸೀಮೆಂಟ್ ದರ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು.
ನಾನು ಈ ಹಿಂದೆಯೇ ಹೇಳಿದಂತೆ ಇದು ಬಿಜೆಪಿ ಕರ್ಫ್ಯೂ. ಬೇಕಾದಾಗ ವಿಧಿಸಿ, ಬೇಡವಾದಾಗ ತೆರವು ಮಾಡುತ್ತಾರೆ. ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು. ಇದರಿಂದ ಜನರಿಗೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗಿದೆ. ಹಣ್ಣು, ತರಕಾರಿ ಬೆಳೆದವರು, ಮಾರುವವರ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂದರು.
ಕೆಎಸ್ಆರ್ಟಿಸಿ, ಮೆಟ್ರೋದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು. ವಿಮಾನಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು. ಹೊಟೇಲ್, ಚಿತ್ರಮಂದಿರ ಹಾಗೂ ಇತರರು ಶೇ.50 ರಷ್ಟು ಮಾತ್ರ ವ್ಯಾಪಾರ ಮಾಡಬೇಕು ಎನ್ನುತ್ತಿದೆ ಸರ್ಕಾರ.ಇದು ಸಾಧ್ಯವೇ ಎಂದು ಪ್ರಶ್ನಿಸಿದರು.
ಸರ್ಕಾರ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆಯಾ ರಾಜ್ಯ ಹಾಗೂ ದೇಶದ ಆರ್ಥಿಕತೆ ನೋಡಬೇಕು. ಆಂಧ್ರ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ ಎಂದು ಕೇಳಿದರು.