ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ 26ನೇ ದಿನವೂ ಮುಂದುವರೆದಿದ್ದು ಸರ್ಕಾರ ಹೆಚ್ಚುವರಿ ಅವಧಿ ತೆಗೆದುಕೊಳ್ಳಲು ಅವಕಾಶ ನೀಡಿ ನಮ್ಮಲ್ಲೇ ಒಡಕು ಉಂಟುಮಾಡಲು ಯತ್ನಿಸುತ್ತಿದೆ ಎಂದು ಅತಿಥಿ ಉಪನ್ಯಾಸಕರ ಸಂಘಗಳು ಆರೋಪಿಸಿವೆ.
ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಪಾಟದ ಅವಧಿಯನ್ನು ಹೆಚ್ಚಿಸಿ ಅನ್ಯಾಯ ಮಾಡಿದೆ. ಹಿಂದೆ ಯುಜಿಸಿ ಮತ್ತು ಡಾಕ್ಟರೇಟ್ ಪದವಿ ಪಡೆದ ಅತಿಥಿ ಉಪನ್ಯಾಸಕರಿಗೆ 13 ಸಾವಿರ ನೀಡಲಾಗುತ್ತಿತ್ತು. ಉಳಿದ ಅತಿಥಿ ಉಪನ್ಯಾಸಕರಿಗೆ 11 ಸಾವಿರ ರೂಪಾಯಿ ನೀಡುತ್ತಿತ್ತು.
ಈಗ ಸರ್ಕಾರದ ನಿಯಮದಂತೆ ವಾರಕ್ಕೆ 15 ಗಂಟೆಗಳ ಪಾಟ ಮಾಡಬೇಕು. ಅಂಥವರಿಗೆ 32 ಸಾವಿರ ರೂಗಳಿಗೆ ಗೌರವಧನ ಹೆಚ್ಚಿಸಿದೆ. ಇದು ಮೇಲ್ನೋಟಕ್ಕೆ ಸರಿಯೆಂಬಂತೆ ಕಂಡುಬಂದರೂ ಪಾಟದ ಅವಧಿ ಹೆಚ್ಚಿಸಿರುವುದರಿಂದ ಮತ್ತೆ ಅದೇ ಕಡಿಮೆ ಗೌರವಧನಕ್ಕೆ ದುಡಿಯಬೇಕಾಗಿದೆ ಎಂದು ಅತಿಥಿ ಉಪನ್ಯಾಸಕರು ನೋವು ತೋಡಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಈಗಿನ ತೀರ್ಮಾನದಿಂದ 14,500 ಅತಿಥಿ ಉಪನ್ಯಾಸಕರ ಪೈಕಿ 7.5 ಸಾವಿರದಷ್ಟು ಅತಿಥಿ ಉಪನ್ಯಾಸಕರು ಮನೆಗೆ ಹೋಗಬೇಕಾಗುತ್ತದೆ. ಇದು ಅನ್ಯಾಯ. ಹಲವು ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರು ವಯಸ್ಸಾದ ಮೇಲೆ ಏನು ಮಾಡಬೇಕು ಎಂಬುದನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ.
ವರ್ಕ್ ಲೋಡ್ ಹೆಚ್ಚಳ ಮಾಡಿದಂತೆ ಗೌರವಧನವನ್ನು ಹೆಚ್ಚಿಸಬೇಕು. ವೇತನ ಜಾಸ್ತಿ ಮಾಡಿ, ಸೇವಾಭದ್ರತೆ ಮಾಡಬೇಕು. ಅತಿಥಿ ಉಪನ್ಯಾಸಕರ ನಡುವೆ ಒಡೆದು ಆಳುವ ನೀತಿಯನ್ನು ಸರ್ಕಾರ ಬಿಡಬೇಕು ಎಂದು ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಒತ್ತಾಯಿಸಿದ್ದಾರೆ.