ಮುಂಬೈನ ಭಾಟಿಯಾ ಆಸ್ಪತ್ರೆ ಸಮೀಪದಲ್ಲಿರುವ 20 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿದ್ದು ಕನಿಷ್ಟ ಏಳು ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ 15 ಮಂದಿ ಗಾಯಗೊಂಡಿದ್ದಾರೆ.
20 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗಲುತ್ತಿದ್ದಂತೆಯೇ ಜನರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದು ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು ಕೆಲವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೆಂಕಿಯನ್ನು ನಂದಿಸಲು 13 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ದುರಂತದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ.
ಬೃಹತ್ ಕಟ್ಟಡದಲ್ಲಿ ಇಂದು ಬೆಳಗ್ಗೆ 7.28ರ ಸುಮಾರಿಗೆ 18ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಹದಿಮೂರು ಅಗ್ನಿಶಾಮಕ ವಾಹನಗಳು ಮತ್ತು ಏಳು ನೀರಿನ ಜೆಟ್ಟಿಗಳು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.