ಭಾರತೀಯ ಆಡಳಿತ ಸೇವೆಯ ನಿಯಮ 1954ಕ್ಕೆ ತಿದ್ದುಪಡಿ ತರುವುದರ ಮೂಲಕ ರಾಜ್ಯಗಳ ಆಡಳಿತದ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಲು ಹೊರಟಿರುವುದು ಸರಿಯಲ್ಲ ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ರಾಜ್ಯ ಸರ್ಕಾರ ಪ್ರತಿಪಕ್ಷಗಳ ಜೊತೆ ಚರ್ಚಿಸಿ ಕೇಂದ್ರದ ನಿಲುವಿಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಉದ್ದೇಶಿತ ತಿದ್ದುಪಡಿಯ ಪ್ರಕಾರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಬೇಕೆಂದಾಗ ಕೇಂದ್ರಕ್ಕೆ ಕರೆಸಿಕೊಳ್ಳುವ, ಬೇಡವೆಂದಾಗ ರಾಜ್ಯಗಳಿಗೆ ವಾಪಸ್ ಕಳಿಸುವ ಪ್ರಸ್ತಾಪ ಇದೆ. ಇದು ಅನುಷ್ಠಾನಗೊಂಡರೆ ರಾಜ್ಯಗಳು ಅನಿವಾರ್ಯವಾಗಿ ಆ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯಗಳ ಅಧಿಕಾರವನ್ನು ಮುಲಾಜಿಲ್ಲದೆ ಕಿತ್ತುಹಾಕಲು ಒಕ್ಕೂಟ ಸರ್ಕಾರ ಮುಂದಾಗಿದೆ. ತಮಗೆ ಬೇಕಾದಂತೆ ಐಪಿಎಸ್, ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಒಮ್ಮತ ಮೂಡದಿದ್ದರೆ, ರಾಜ್ಯಗಳಿಗೆ ಕೇಂದ್ರ ಸರ್ಕಾರದ ತೀರ್ಮಾನಗಳ ಬಗ್ಗೆ ತಕರಾರು ಇದ್ದರೂ ಕೂಡ ರಾಜ್ಯಗಳು ಕೇಂದ್ರದ ತೀರ್ಮಾನವನ್ನು ನಿರ್ದಿಷ್ಟ ಅವಧಿ ಒಳಗೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರಾಜ್ಯಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ನಿಯೋಜನೆ, ವರ್ಗಾವಣೆ ಮೇಲಿನ ಅಧಿಕಾರವನ್ನು ಕೇಂದ್ರವು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಹೊರಟಿರುವುದು ಸಂವಿಧಾನ ವಿರೋಧಿ, ಒಕ್ಕೂಟ ತತ್ವ ವಿರೋಧಿ ಕೃತ್ಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಸಾಮ್ರಾಜ್ಯಶಾಹಿ, ಪಾಳೇಗಾರಿಕೆ ಧೋರಣೆ ನಿಲ್ಲಬೇಕು. ಅಧಿಕಾರಿಗಳ ಮೇಲೆ ನಿಯಂತ್ರಣ ಎಂದರೆ ಆಡಳಿತದ ಮೇಲಿನ ನಿಯಂತ್ರಣವೆಂದರ್ಥ. ರಾಜ್ಯ ಸರ್ಕಾರ ಅಧಿಕಾರಿಗಳ ಮೇಲೆ ನಿಯಂತ್ರವಿಲ್ಲದಿದ್ದರೆ ಜನರ ಕೆಲಸಗಳನ್ನು ಹೇಗೆ ಮಾಡಿಸುವುದು ಎಂದು ಪ್ರಶ್ನಿಸಿದ್ದಾರೆ.
ಮೋದಿ ಅವರ ಒಕ್ಕೂಟ ತತ್ವ ವಿರೋಧಿ ಧೋರಣೆಯನ್ನು ಆರು ರಾಜ್ಯಗಳು ಖಂಡಿಸಿವೆ. ಉಳಿದ ರಾಜ್ಯಗಳಲ್ಲೂ ಬಿಜೆಪಿಯ ವಿರುದ್ಧ ಆಕ್ರೋಶ ಮಡುಗಟ್ಟಿದೆ. ಇದು ಅನಾಹುತಕಾರಿ ದಿಕ್ಕಿಗೆ ತಿರುಗಬಹುದು. ಹೀಗಾಗಿ ಸಂವಿಧಾನ ಪಿತೃಗಳ ಆಶಯದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.