ಪ್ರಧಾನಿ ಮೋದಿ ಅವರ ಪಂಜಾಬ್ ಭೇಟಿ ಸಂದರ್ಭದಲ್ಲಿ ಉಂಟಾದ ಭದ್ರತಾ ಲೋಪದ ತನಿಖಾ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು ಮುಖ್ಯಸ್ಥರನ್ನಾಗಿ ಸುಪ್ರೀಂಕೋರ್ಟ್ ಬುಧವಾರ ನೇಮಕ ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ಸದಸ್ಯ ಪೀಠ, ಭದ್ರತಾ ಲೋಪದ ಕುರಿತು ತನಿಖೆ ನಡೆಸಲು ಸಮಿತಿಯನ್ನು ನೇಮಕ ಮಾಡಿದೆ. ಭದ್ರತಾ ಲೋಪಕ್ಕೆ ಜವಾಬ್ದಾರರಾದ ವ್ಯಕ್ತಿಗಳು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕ್ಕೆ ಮುಂದಾಗುವುದು ಮತ್ತು ಇತರೆ ಸಾಂವಿಧಾನಿಕ ಕಾರ್ಯಗಳನ್ನು ನಿರ್ವಹಿಸಲಿದೆ.
ಸಮಿತಿಯಲ್ಲಿ ಚಂಡೀಘಡದ ಪೊಲೀಸ್ ಮಹಾನಿರ್ದೇಶಕರು, ರಾಷ್ಟ್ರೀಯ ತನಿಖಾ ಏಜೆನ್ಸಿಯ ಇನ್ಸ್ ಪೆಕ್ಟರ್ ಜನರಲ್ ಅಥವಾ ನಾಮನಿರ್ದೇಶನ ಅಧಿಕಾರಿ, ಪಂಜಾಬ್, ಹರ್ಯಾಣ ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್, ಪಂಜಾಬ್ ಭದ್ರತಾ ವಿಭಾಗದ ಸಹಾಯಕ ಡಿಜಿಪಿ ಇದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರತಾ ಲೋಪದ ತನಿಖೆಗಾಗಿ ನೇಮಕ ಮಾಡಿರುವ ಸಮಿತಿಗಳು ತನಿಖೆ ನಡೆಸದಂತೆ ಸುಪ್ರೀಂಕೋರ್ಟ್ ಈಗಾಗಲೇ ತಡೆಹಾಕಿದೆ.
ಪ್ರಧಾನಿಗಳಿಗಾದ ಭದ್ರತಾ ಲೋಪವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ತನಿಖಾ ಸಮಿತಿ ಶೀಘ್ರವೇ ವರದಿ ಸಲ್ಲಿಸಬೇಕು ಎಂದು ಹೇಳಿದೆ.
ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅವರ ಪರವಾಗಿ ಅಡ್ವೊಕೇಟ್ ಜನರಲ್ ಪಟವಾಲಿಯ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಕೇಂದ್ರ ಸರ್ಕಾರದ ಪರ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, ಶೋಕಾಸ್ ನೋಟಿಸ್ ನೀಡಿದ್ದನ್ನು ಸಮರ್ಥಿಸಿಕೊಂಡರು. ಕೇಂದ್ರ ಸರ್ಕಾರದ ವಾದಕ್ಕೆ ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿತು.