ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದರೂ ನಿಮ್ಮ ವೈಯಕ್ತಿಕ ಹಠ ಸಾಧನೆಗೆ ಜನರನ್ನೇಕೆ ಸಂಕಷ್ಟಕ್ಕೆ ದೂಡುತ್ತೀರಿ ಎಂದು ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಸಿಡಿಮಿಡಿ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಿಲ್ಲಿಸುವಂತೆ ಎಚ್.ಎಂ.ರೇವಣ್ಣ, ಸಿ.ಎಂ.ಇಬ್ರಾಹಿಂ, ಎನ್.ಎಚ್.ಶಿವಶಂಕರರೆಡ್ಡಿ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರು ಯಾತ್ರೆ ನಿಲ್ಲಿಸುವಂತೆ ಮನವಿ ಮಾಡಿದರೂ ಕೆಪಿಸಿ ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಮ್ಮತ್ತು ನೀಡುತ್ತಿಲ್ಲ ವಾಗ್ದಾಳಿ ನಡೆಸಿದೆ.
ಕೊವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಬೇಡ ಎಂಬ ಸರ್ಕಾರದ ಮನವಿಗೆ ಕಾಂಗ್ರೆಸ್ ಒಪ್ಪುತ್ತಿಲ್ಲ. ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ ಮೇಲಾದರೂ ಸುಳ್ಳಿನ ಜಾತ್ರೆ ನಿಲ್ಲಿಸುತ್ತಿರೋ ಅಥವಾ ಕೊರೊನ ಹರಡುವ ಕಾಂಗ್ರೆಸ್ ಎನಿಸಿಕೊಳ್ಳುತ್ತಿರೋ ಎಂದು ಲೇವಡಿ ಮಾಡಿದ.
ಮೇಕೆದಾಟು ಪಾದಯಾತ್ರೆಯ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಕೊವಿಡ್ ಸಂದರ್ಭದಲ್ಲಿ ಪಾದಯಾತ್ರೆ ಅಗತ್ಯವಿತ್ತೇ? ಕಾಂಗ್ರೆಸ್ ಮುಖಂಡರೇ ಜನರ ಭಾವನೆಗಳಿಗೆ ಬೆಲೆ ಕೊಡದೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೋರಿದ್ದೀರಿ ನ್ಯಾಯಾಲಯದ ಆಕ್ಷೇಪಕ್ಕಾದರೂ ತಲೆಬಾಗಿ ಎಂದು ಬಿಜೆಪಿ ತಾಕೀತು ಮಾಡಿದೆ.
ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಹೋರಾಟ ನಡೆಸುವುದು ನಿಮ್ಮ ಹಕ್ಕು, ಆದರೆ ಕೊವಿಡ್ ಸಮಯದಲ್ಲಿ ಅರಿವು ಬೇಡವೇ? ಪಾದಯಾತ್ರೆಯಲ್ಲಿ ಭಾಗವಹಿಸಿದ ನಾಯಕರಿಗೆ ಸೋಂಕು ತಗಲುತ್ತಿದೆ. ಹಾಗಾಗಿ ಮೇಕೆದಾಟು ಹೋರಾಟದ ಹೆಸರಿನಲ್ಲಿ ಅಮಾಯಕರ ಪ್ರಾಣ ದಾಟಿಸಬೇಡಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಕೋರ್ಟ್ ತರಾಟೆಗೆ:
ಕಾಂಗ್ರೆಸ್ ಪಾದಯಾತ್ರೆ ತಡೆಯುವಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ರಾಜ್ಯ ಸರ್ಕಾರದ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದೆ.