ರಾಜ್ಯದಲ್ಲಿನ ಪ್ರಸ್ತುತ ಕೊರೊನ ಸ್ಥಿತಿಗತಿ ಹಾಗೂ ನಿಯಂತ್ರಣ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವರ್ಚ್ಯುಯಲ್ ಸಭೆ ನಡೆಯಿತು. ಹಿರಿಯ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ, ರಾಜ್ಯದಲ್ಲಿ 10ರಷ್ಟಿದ್ದ ಕೊರೊನ ಸೋಂಕಿತ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯದಲ್ಲಿ 14,500 ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೊನ ಸೋಂಕಿತರ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗಿದ್ದು ನಗರವೊಂದರಲ್ಲೇ 10,800 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಕಳೆದ ಎರಡು ದಿನಗಳಿಂದ ಕೊರೊನ ಪ್ರಕರಣಗಳು ಹೆಚ್ಚಾಗಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಪಾಸಿಟಿವಿ ದರ 10.30ರಷ್ಟು ಏರಿಕೆಯಾಗಿದೆ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.
ಜನವರಿ 11ರಂದು ರಾಜ್ಯದಲ್ಲಿ 1356 ಮಂದಿ ಗುಣಮುಖರಾಗಿದ್ದಾರೆ. ಆಕ್ಟೀವ್ ಕೇಸುಗಳು 73,260 ಇದ್ದು, ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 59 ಸಾವಿರ ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲಿ ಇಂದು 5 ಮಂದಿ ಕೊರೊನ ಸೋಂಕಿನಿಂದ ಮೃತಪಟ್ಟಿದ್ದು ಬೆಂಗಳೂರಿನಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.