ಅತಿಥಿ ಉಪನ್ಯಾಸಕರ ಅನಿರ್ದಿಷ್ಠಾವಧಿ ಧರಣಿ ಮುಂದುವರೆದಿದೆ. ಕೊವಿಡ್ ನಡುವೆಯೂ ತಮ್ಮ ಬೇಡಿಕೆಗಳ ಈಡೇರಿಕೆಗೆ ಹಗಲು-ರಾತ್ರಿ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದಾರೆ. ತುಮಕೂರಿನಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ನಟ ಚೇತನ್ ಅತಿಥಿ ಉಪನ್ಯಾಸಕರಿಗೆ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ ಪ್ರತಿಯೊಂದು ಜಿಲ್ಲೆಯಿಂದ ಅತಿಥಿ ಉಪನ್ಯಾಸಕರ ಪ್ರತಿನಿಧಿಗಳು ಸರ್ಕಾರದ ಜೊತೆ ಮಾತುಕತೆಯಲ್ಲಿ ತೊಡಗಿದ್ದಾರೆ. ಮಾತುಕತೆಯ ವಿವರಗಳು ಸಧ್ಯಕ್ಕೆ ಲಭ್ಯವಾಗಿಲ್ಲ. ಆದರೆ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸುವ ಸಂಬಂಧ ರಚಿಸಿದ ಸಮಿತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೇ ಇಲ್ಲವೇ ಎಂಬುದು ತಿಳಿದುಬಂದಿಲ್ಲ.
ಈಗಾಗಲೇ ಉನ್ನತ ಶಿಕ್ಷಣ ಸಚಿವರು ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಲು ಕಾನೂನು ತೊಡಕುಗಳಿವೆ ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿದ್ದು, ಅತಿಥಿ ಉಪನ್ಯಾಸಕರು ಸೇವಾಭದ್ರತೆಗೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ನೂರಾರು ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ 16 ದಿನಗಳಿಂದ ಪಾಠ-ಪ್ರವಚನಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಸೂಕ್ತ ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅತಿಥಿ ಉಪನ್ಯಾಸಕರು ಹೇಳಿದ್ದಾರೆ.
ನಟ ಚೇತನ್ ಮಾತನಾಡಿ, ಅತಿಥಿ ಉಪನ್ಯಾಸಕರು ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕಾದುದು ಸರ್ಕಾರ ಜವಾಬ್ದಾರಿ. ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದರು.