ದೇಶದ ಬಹುತ್ವದ ಸಂವಿಧಾನವನ್ನು ಬದಲಾಯಿಸಿ ಹಿಂದುತ್ವ ಸಂವಿಧಾನ ಜಾರಿ ಮೂಲಕ ಹಿಂದೂರಾಷ್ಟ್ರ ನಿರ್ಮಾಣಕ್ಕೆ ಆರ್.ಎಸ್.ಎಸ್ ಪ್ರಯತ್ನ ನಡೆಸುತ್ತಿದೆ. ಇದನ್ನು ಜನರು ತಿರಸ್ಕರಿಸಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಲಹೆ ನೀಡಿದರು.
ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಿಪಿಎಂನ 26ನೇ ರಾಷ್ಟ್ರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
2019ರ ನಂತರ ಆರ್.ಎಸ್.ಎಸ್.ನ ಹಿಂದುತ್ವ ಅಜೆಂಡವನ್ನು ಅಕ್ರಮಣಶೀಲವಾಗಿ ಜಾರಿಗೊಳಿಸುತ್ತಿದೆ. ಹಿಂದುತ್ವ ರಾಷ್ಟ್ರ ನಿರ್ಮಾಣವೇ ಇದರ ಉದ್ದೇಶವಾಗಿದೆ. ಹಿಂದುತ್ವ ರಾಷ್ಟ್ರದಲ್ಲಿ ಬೇರೆ ಧರ್ಮದವರು ಭಾರತದಲ್ಲಿ ಇರಬಾರದು ಎಂಬುದೇ ಬಿಜೆಪಿ ಮತ್ತು ಆರ್.ಎಸ್.ಎಸ್ ಉದ್ದೇಶವಾಗಿದೆ ಎಂದರು.
ದೆಹಲಿ ಸೇರಿ ಇತರ ಕಡೆ ನಡೆದ ಧರ್ಮ ಸಂಸದ್ ನಲ್ಲಿ ಸಾಧುಗಳು ಆಯುಧಗಳನ್ನು ತೆಗೆದುಕೊಂಡು ಮುಸ್ಲಿಮರು, ಕ್ರಿಶ್ಚಿಯನ್ನರ ವಿರುದ್ಧ ಹೋರಾಟ ಮಾಡಬೇಕೆಂದು ಕರೆ ನೀಡಿರುವುದು ಕೂಡ ಹಿಂದುರಾಷ್ಟ್ರ ನಿರ್ಮಾಣದ ಭಾಗವಾಗಿದೆ. ಈ ದೇಶದ ಜಾತ್ಯತೀತ ವ್ಯವಸ್ಥೆಯನ್ನು ನಾಶ ಮಾಡಲು ಆರ್.ಎಸ್.ಎಸ್ ಹೊರಟಿದೆ ಎಂದು ದೂರಿದರು.
ಹಿಂದೂರಾಷ್ಟ್ರ-ಮುಸ್ಲಿಂ ರಿಪಬ್ಲಿಕ್ ಎರಡೂ ಅಪಾಯಕಾರಿ. ಇವೆರಡನ್ನೂ ಜನ ತಿರಸ್ಕರಿಸಬೇಕು. ಆರ್.ಎಸ್.ಎಸ್. ಹಿಂದು ರಾಷ್ಟ್ರಕ್ಕೆ ಕೊನೆ ಹಾಡಬೇಕು. ಹಿಂದು ರಾಷ್ಟ್ರ ನಿರ್ಮಾಣದ ಹಿನ್ನೆಲೆಯಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಲಾಯಿತು ಎಂಬುದನ್ನು ನಾವು ಗಮನಿಸಬೇಕು ಎಂದರು.
ದೇಶದ ಹಲವು ಮತ-ಧರ್ಮಗಳ ನಡುವಿನ ಐಕ್ಯತೆಯನ್ನು ಛಿದ್ರಗೊಳಿಸಿ ನಿರಂಕುಶ ಪ್ರಭುತ್ವ ಜನರನ್ನು ಹಿಂಸೆಗೆ ದೂಡುತ್ತಿದೆ. ಬಲಪಂಥೀಯ ಧೋರಣೆ ಹೆಚ್ಚುತ್ತಿದ್ದು ಕೊವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕ್ಷೋಭೆ ತೀವ್ರವಾಗಿ ಬೆಳೆಯುವಂತೆ ಮಾಡಿದೆ ಎಂದು ಟೀಕಿಸಿದರು.
ಬಲಪಂಥೀಯತೆಯಿಂದ ಆರ್ಥಿಕ ಸಂರಕ್ಷೋಭೆ ಹೆಚ್ಚುತ್ತಿದೆ. ದೇಶದ ಶ್ರೀಮಂತರ ಲಾಭಾಂಶವೂ ದ್ವಿಗುಣವಾಗುತ್ತಿದೆ. ಸೆನ್ಸೆಕ್ ಏರಿಕೆ ಆಗುತ್ತದೆ. ನಿರುದ್ಯೋಗ, ಕಷ್ಟಗಳು ಹೆಚ್ಚಾಗುತ್ತಿವೆ ಎಂದು ವಿವರಿಸಿದರು.