ಸೇವಾ ಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಜನವರಿ 7 ರಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಅಹೋರಾತ್ರಿ ಧರಣಿ ನಡೆಸುತ್ತೇವೆಯೇ ಹೊರತು ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎಂದು ಅತಿಥಿ ಉಪನ್ಯಾಸಕರು ಖಚಿತ ನಿಲುವು ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ವಾರಾಂತ್ಯದ ಕರ್ಪ್ಯೂ ಇದೆ. ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ಕರ್ಪ್ಯೂ ವಿಧಿಸಲಾಗಿದೆ. ಹಾಗಾಗಿ ಧರಣಿ ವಾಪಸ್ ಪಡೆಯುವಂತೆ ಪೊಲೀಸರು ಅತಿಥಿ ಉಪನ್ಯಾಸಕರಿಗೆ ಮನವಿ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿ ಅಹೋರಾತ್ರಿ ಧರಣಿ ಆರಂಭಿಸಿರುವ ಅತಿಥಿ ಉಪನ್ಯಾಸಕರು, ನಾವು ಕೊವಿಡ್ ನಿಯಮ ಪಾಲಿಸುತ್ತೇವೆ. ಮಾಸ್ಕ್ ಧರಿಸುತ್ತೇವೆ. ದೈಹಿಕ ಅಂತರ ಕಾಪಾಡಿಕೊಳ್ಳುತ್ತೇವೆ. ಕರ್ಪ್ಯೂ ಹೇರಿದ್ದರೂ ನಾಲ್ಕು ಮಂದಿಯೇ ಕುಳಿತು ಮುಷ್ಕರ ಮುಂದುವರೆಸುತ್ತೇವೆ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟರು.
ನಾವು ಪ್ರತಿಭಟನಾ ಧರಣಿ ಆರಂಭಿಸಿ 10 ದಿನವು ಮುಂದುವರೆದಿದೆ. ಎಲ್ಲಾ ಪಕ್ಷಗಳ ಶಾಸಕರು, ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿದೆ. ಹಾಗಾಗಿ ಸೇವಾ ಭದ್ರತೆ ಕಲ್ಪಿಸುವವರೆಗೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದರು.
ಜನವರಿ 7ರ ರಾತ್ರಿ 8 ಗಂಟೆಯಿಂದ ಕರ್ಪ್ಯೂ ವಿಧಿಸಿರುವುದು ನಮ್ಮ ಗಮನಕ್ಕೂ ಬಂದಿದೆ. ಅದರಂತೆ 5 ಮಂದಿ ಒಂದು ಕಡೆ ಸೇರಬಾರದೆಂಬ ನಿಯಮವಿದೆ. ಹಾಗಾಗಿ ಕರ್ಪ್ಯೂ ಸಮಯದಲ್ಲಿ ನಾಲ್ಕು ಮಂದಿ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ. ಪೊಲೀಸರಿಗೂ ಈ ಮಾಹಿತಿ ನೀಡಿದ್ದೇವೆ. ನಮ್ಮ ಮುಷ್ಕರ ನಿನ್ನೆ ತೀರ್ಮಾನವಾಗಿಲ್ಲ. ಇದಕ್ಕೆ ಪೊಲೀಸರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಜಿಲ್ಲೆಯ 15 ಕಾಲೇಜುಗಳ ಅತಿಥಿ ಉಪನ್ಯಾಸಕರು ಅಹೋರಾತ್ರಿ ಧರಣಿ ಸ್ಥಳಕ್ಕೆ ಬಂದು ಧರಣಿ ನಡೆಸಿ ಹೋಗುತ್ತೇವೆ. ಈ ಸಂದರ್ಭದಲ್ಲಿಯೂ ಕೋವಿಡ್ ನಿಯಮಗಳು ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಶಾಂತಿಭಂಗಕ್ಕೆ ಅವಕಾಶ ನೀಡುವುದಿಲ್ಲ. ಸೇವಾಭದ್ರತೆಯೊಂದಿಗೆ ಮನೆಗೆ ಮರಳುತ್ತೇವೆ ಎಂದು ಅತಿಥಿ ಉಪನ್ಯಾಸಕರಾದ ಡಾ.ಶಿವಣ್ಣ ತಿಮ್ಲಾಪುರ, ಡಾ.ಹನುಮಂತರಾಯಪ್ಪ, ಜಿ.ಕೆ.ನಾಗಣ್ಣ, ಆಂಜನಮೂರ್ತಿ, ಕುಮಾರ್ ತಿಳಿಸಿದರು.


