ರಾಜ್ಯ ಸರ್ಕಾರ ಲಾಕ್ ಡೌನ್ ಹೇರುವ ಮೂಲಕ ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಶೇ.5ಕ್ಕಿಂತ ಕಡಿಮೆ ಇದೆ. ಆದರೂ ಸರ್ಕಾರ ಅವೈಜ್ಞಾನಿಕವಾಗಿ ಮತ್ತು ಅನಗತ್ಯವಾಗಿ ಲಾಕ್ ಡೌನ್ ಹೇರಿದೆ ಎಂದು ದೂರಿದರು.
ಕೊವಿಡ್ ಸೋಂಕಿತ ಶೇ.45ರಷ್ಟು ಮಂದಿ ರೋಗಿಗಳು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ.5ರಷ್ಟು ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸೋಂಕಿತರು ಸಂಖ್ಯೆ ಹೆಚ್ಚಾಗಿ ಐಸಿಯು ಮತ್ತು ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣದಲ್ಲಿ ಹೆಚ್ಚಾದರೆ ಮಾತ್ರ ಲಾಕ್ ಡೌನ್ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಜನರನ್ನು ನರಳುವಂತೆ ಮಾಡುತ್ತಿದೆ. ದುಡಿಯುವ ಜನತೆ ಸಂಕಷ್ಟ ಎದುರಿಸುತ್ತಿದೆ. ಇದನ್ನು ಮನಗಾಣದ ಸರ್ಕಾರ ಇಂತಹ ಅವೈಜ್ಞಾನಿಕ ತೀರ್ಮಾನಗಳನ್ನು ಕೈಗೊಂಡಿದೆ ಎಂದು ಆಪಾದಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ದ್ವೇಷದ ರಾಜಕಾರಣಕ್ಕಾಗಿ ಜನರ ವಿರೋಧದ ನಡುವೆಯೂ ಲಾಕ್ ಡೌನ್ ಹೇರಿರುವುದರಿಂದ ರಾಜ್ಯದ ಆರ್ಥವ್ಯವಸ್ಥೆ ಹಾಳಾಗುತ್ತಿದೆ ಎಂದು ಟೀಕಿಸಿದರು.
ಬೀದಿಬದಿ ವ್ಯಾಪಾರಿಗಳು, ಕಾರ್ಮಿಕರು, ವ್ಯಾಪಾರಿಗಳು, ರೈತರು, ಆಟೋಚಾಲಕರು, ಜನಸಾಮಾನ್ಯರು ಹೀಗೆ ಹಲವು ವಿಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತದೆ. ಜನರ ನೋವನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ. ಹಾಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ದೇವರು ಜ್ಞಾನ ಕೊಡಲಿ ಎಂದು ಹೇಳಿದರು.


