ತೃಣಮೂಲ ಕಾಂಗ್ರೆಸ್ ತನ್ನ ಭೌಗೋಳಿಕ ಕಾರ್ಯಕ್ಷೇತ್ರವನ್ನು ಪಶ್ಚಿಮ ಬಂಗಾಳದ ಹೊರಗೂ ವಿಸ್ತರಿಸಲು ಯತ್ನಿಸುತ್ತಿದ್ದು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಹೋರಾಟ ನಡೆಸಲು ಸಜ್ಜಾಗುತ್ತಿದೆ.
ಪಕ್ಷದ ರಾಷ್ಟ್ರೀಯ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ ಟಿಎಂಸಿ ಬಿಹಾರ ಕಾಂಗ್ರೆಸ್ ನಾಯಕ ಮತ್ತು ಬಿಜೆಪಿ ಮಾಜಿ ಸಂಸದ ಕೀರ್ತಿ ಅಜಾದ್, ಜೆಡಿಯು ಮಾಜಿ ಸಂಸದ ಪವನ್ ವರ್ಮಾ, ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ತನ್ವಾರ್, ದೆಹಲಿ ಮೂಲದ ಆರ್.ಟಿ.ಐ ಕಾರ್ಯಕರ್ತ ಸಾಕೇತ್ ಗೋಖಲೆ, ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಶ್ಮಿತಾ ದೇವ್, ಗೋವಾ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೇರಿಯೊ, ಕೇಂದ್ರ ಮಾಜಿ ಸಚಿವ ಬಾಬುಲ್ ಸುಪ್ರಿಯೋ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟಿಎಂಸಿ ತನ್ನ ಪ್ರಾದೇಶಿಕ ಪಕ್ಷದ ಟ್ಯಾಗ್ ಅನ್ನು ತೆಗೆದುಹಾಕಲು ತೀರ್ಮಾನಿಸಿದೆ. ಇತ್ತೀಚೆಗೆ ಸೇರ್ಪಡೆಗೊಂಡ ನಾಯಕರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಗುರು ಮತ್ತು ಶಕ್ತಿ ಹೊಂದಿದ್ದಾರೆ.
ಈ ಸೇರ್ಪಡೆ ನಮ್ಮ ಪಕ್ಷದ ರಾಷ್ಟ್ರೀಯ ವಿಸ್ತರಣೆಯ ಭಾಗವಾಗಿದೆ. ಆದ್ದರಿಂದ ನಾವು ಪ್ಯಾನ್ ಇಂಡಿಯಾ ಮನವಿ ಹೊಂದಿದ್ದೇವೆ. 2024ರ ಲೋಕಸಭಾ ಚುನಾವಣೆಯ ಕಾರ್ಯತಂತ್ರ ರೂಪಿಸುವ ಮೊದಲು ಸಮಗ್ರ ದೃಷ್ಟಿಕೋನ ಹೊಂದಿರಬೇಕಾಗುತ್ತದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
2022ರ ವೇಳೆಗೆ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಲು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಬದಲಾವಣೆಗೆ ಒಡ್ಡಿಕೊಳ್ಳುತ್ತಿದೆ. ನಾವೇ ನಿಜವಾದ ಕಾಂಗ್ರೆಸ್, ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಬಿಜೆಪಿಯನ್ನು ವಿರೋಧಿಸುವ ವಿವಿಧ ರಾಜ್ಯಗಳ ನಿರೀಕ್ಷಿತ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ವರ್ಮಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಕಳೆದ ಹತ್ತು ವರ್ಷಗಳಲ್ಲಿ ಟಿಎಂಸಿ ತನ್ನ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಮ್ಮ ಅಭಿವೃದ್ಧಿ ನೀತಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ. ಇತರೆ ರಾಜ್ಯಗಳು ಸಹ ನಮ್ಮನ್ನು ಅನುಸರಿಸುತ್ತಿವೆ. ರಾಷ್ಟ್ರಮಟ್ಟದಲ್ಲಿ ಬಂಗಾಳ ಮಾದರಿ ಆಗಿದೆ ಎಂದು ಟಿಎಂಸಿ ಮುಖಂಡ ಕುನಾಲ್ ಘೋಷ್ ಹೇಳಿಕೆ ಉಲ್ಲೇಖಿಸಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದೇ ವೇಳೆ ಪಕ್ಷದ ಹೆಸರನ್ನು ಬದಲಾಯಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಇನ್ನೂ ಯಾವುದನ್ನೂ ಅಂತಿಮ ಗೊಳಿಸಲಾಗಿಲ್ಲ ಎಂದು ಸೌಗತ ರಾಯ್ ಹೇಳಿದ್ದಾರೆ.


