ಪಾದರಕ್ಷೆಗಳಿಂದ ಹಿಡಿದು ಆಹಾರ ವಿತರಣೆವರೆಗೆ ಜಿಎಸ್.ಟಿ. ಹೆಚ್ಚಳ ಮಾಡಿರುವ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವಂತೆ ಮತದಾರರಿಗೆ ಮನವಿ ಮಾಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಹಿಮಾಚಲ ಪ್ರದೇಶ ಮತ್ತು ಇತರೆ ಕೆಲ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿತು. ಹೀಗಾಗಿ ಮತದಾರರು ಬುದ್ದಿವಂತಿಕೆಯಿಂದ ಹಕ್ಕು ಚಲಾಯಿಸಬೇಕು. ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಎಂದರು.
ಜವಳಿ ಮೇಲಿನ ಜಿಎಸ್.ಟಿ ಹೆಚ್ಚಳ ಮಾಡುವುದನ್ನು ಜಿಎಸ್.ಟಿ. ಕೌನ್ಸಿಲ್ ತಾತ್ಕಾಲಿಕ ತಡೆ ಹಾಕಿದೆ. ಆದರೆ ಐದು ರಾಜ್ಯಗಳ ಚುನಾವಣೆಗಳು ಪೂರ್ಣಗೊಂಡ ನಂತರ ತೆರಿಗೆಗಳನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.
ಜವಳಿ ಮೇಲಿನ ಜಿಎಸ್.ಟಿ ಹೆಚ್ಚಳದ ಪ್ರಸ್ತಾಪ ಹಿಂದಕ್ಕೆ ತೆಗೆದುಕೊಂಡಿಲ್ಲ; ಮುಂದೂಡಲಾಗಿದೆ ಎಂಬುದನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು. ಚುನಾವಣೆ ಮುಗಿಯುವವರೆಗೆ ನಿರ್ಧಾರ ಮುಂದೂಡಬಹುದು. ಚುನಾವಣೆ ಮುಗಿದ ನಂತರ ತೆರಿಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿದರು.
ತೆರಿಗೆ ಹೆಚ್ಚಳದಿಂದ ಜ.1 ರಿಂದ ಪಾದರಕ್ಷೆ, ರೈಡ್ ಹೇಲಿಂಗ್ ಅಪ್ಲಿಕೇಶನ್ ಬಳಸಿಕೊಂಡು ಟ್ಯಾಕ್ಸಿ, ಆಟೋ ಬಾಡಿಗೆ ಪಡೆಯುವುದು ಆಹಾರ ವಿತರಣಾ ಅಪ್ಲಿಕೇಶನ್ ಬಳಸಿಕೊಂಡು ಆಹಾರ ಆರ್ಡರ್ ಮಾಡುವುದು, ಮಕ್ಕಳಿಗೆ ಡ್ರಾ ಕಿಟ್ ಮತ್ತು ಎಟಿಎಂಗಳಿಂದ ಹಣ ಪಡೆಯುವುದು ದುಬಾರಿಯಾಗಿದೆ ಎಂದರು.
2014 ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಚಹಾ, ಬೇಳೆಕಾಳು, ಖಾದ್ಯ ತೈಲ, ಅಡುಗೆ ಅನಿಲ ಮತ್ತು ಉಪ್ಪಿನ ಬೆಲೆ ಹೆಚ್ಚಾಗಿದೆ ಎಂದು ವಿವರಿಸಿದರು.
ನೆನಪಿಡಿ, ಮೋದಿ ಇದ್ದರೆ ಬೆಲೆ ಏರಿಕೆ ಹೆಚ್ಚುತ್ತಲೇ ಇರುತ್ತದೆ. ಮೋದಿ ಸರ್ಕಾರ ದುಬಾರಿ ಬೆಲೆ ಮತ್ತು ಹಣದುಬ್ಬರ ದೇಶಕ್ಕೆ ಹಾನಿಕಾರಕ ಎಂದು ಹೇಳಿದ ಸುರ್ಜೇವಾಲ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವಂತೆ ಕರೆ ನೀಡಿದರು.