ಶಾಮನಿಸಂನಲ್ಲಿ ಆಸಕ್ತಿ ಹೊಂದಿದ್ದ 17 ವರ್ಷದ ಬಾಲಕಿ 2 ತಿಂಗಳ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದರೂ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಆಕೆಯ ಪೋಷಕರು ಮಗಳನ್ನು ಪತ್ತೆ ಹಚ್ಚಲು ಟ್ವಿಟ್ಟರ್ ಮೂಲಕ ಸಾರ್ವಜನಿಕರ ಸಹಾಯ ಕೋರಿದ್ದಾರೆ.
ಚೈತ್ರ (ಹೆಸರು ಬದಲಿಸಲಾಗಿದೆ) ಅಕ್ಟೋಬರ್ 31ರಂದು ರಾತ್ರಿ 8 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಬೆಂಗಳೂರಿನ ರಾಜಾಜಿ ನಗರದ ಮನೆಯಿಂದ ಹೋಗಿದ್ದಾಳೆ. ಚೈತ್ರ ಫ್ಯಾಷನ್ ವಿನ್ಯಾಸ ಕಲಿಯಲು ಇಚ್ಚಿಸಿದ್ದು, ಉತ್ತಮ ಕಾಲೇಜಿಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.
ಚೈತ್ರ ಎರಡು ಜೊತೆ ಬಟ್ಟೆ, ಸ್ವಲ್ಪ ಹಣ ಮತ್ತು ತನ್ನ ಮೊಬೈಲ್ ಪೋನ್ ತೆಗೆದುಕೊಂಡು ಹೋಗಿದ್ದು, ಆಕೆಯ ಪೋಷಕರು ಎಷ್ಟೇ ಹುಡುಕಿದರೂ ಪತ್ತೆಯಾಗಿಲ್ಲ. ಹಾಗಾಗಿ ಸುಬ್ರಹ್ಮಣ್ಯನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದ ವೇಳೆ ಒಂದು ಕಡೆ ಕ್ಯಾಮೆರಾದಲ್ಲಿ ಆಕೆ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಹೋಗುತ್ತಿರುವ ದಶ್ಯ ಸೆರೆಯಾಗಿರುವ ದೃಶ್ಯಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಆದರೆ ಆಕೆಯ ಸುಳಿವು ಇದುವರೆಗೂ ಪತ್ತೆಯಾಗಿಲ್ಲ.
ಆಕೆ ಆನ್ ಲೈನ್ ನಲ್ಲಿ ಶಾಮನಿಸಂ ಅನ್ನು ಅಭ್ಯಸಿಸುತ್ತಿದ್ದಳು ಎಂದು ಪೋರೆನ್ಸಿಕ್ ವಿಶ್ಲೇಷಣೆಯಲ್ಲಿ ಕಂಡುಬಂದಿದೆ. ಹೀಗಾಗಿ ಪೊಲೀಸ್ ತಂಡ ಆಧ್ಯಾತ್ಮಕ ಚಟುವಟಿಕೆ ಮತ್ತು ಧ್ಯಾನ ನಡೆಸುವ ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸ್ ಆಯುಕ್ತ ಪಾಟೀಲ್ ಹೇಳಿಕೆಯನ್ನು ಉಲ್ಲೇಖಿಸಿ ಡೆಕನ್ ಹೆರಾಲ್ಡ್ ವರದಿ ಮಾಡಿದೆ.
ಇತ್ತೀಚೆಗಷ್ಟೇ ಶಾಮನಿಸಂನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ಈ ಬಗ್ಗೆ ಹಲವು ಬಾರಿ ಪೋಷಕರಿಗೆ ಆಕೆ ತಿಳಿಸಿದ್ದಳು ಎಂಬುದನ್ನು ಆಕೆಯ ಕುಟುಂಬದವರು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.