ಹರಿಯಾಣದ ಭಿವಾನಿ ಜಿಲ್ಲೆಯ ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು ಇಬ್ಬರು ಮೃತಪಟ್ಟಿದ್ದು, ಸುಮಾರು 20 ಮಂದಿ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಗಣಿಗಾರಿಕೆಯಿಂದ ಗುಡ್ಡ ಬಿರುಕು ಬಿಟ್ಟಿತ್ತು. ಇಂದು ಭೂಕುಸಿತ ಉಂಟಾಗಿ ಅಲ್ಲಿಯೇ ಕೆಲಸ ಮಾಡುತ್ತಿದ್ದ 20 ಕಾರ್ಮಿಕರು ಮತ್ತು 8-10 ವಾಹನಗಳು ಗುಡ್ಡದ ಅವಶೇಷಗಳಡಿ ಸಿಲುಕಿವೆ.
ರಕ್ಷಣಾ ತಂಡ ಸ್ಥಳಕ್ಕೆ ತಲುಪಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಇದುವರೆಗೆ ಅವಶೇಷಗಳ ಅಡಿಯಿಂದ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ತೋಷಮ್ ಬ್ಲಾಕ್ ನ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಗುಡ್ಡದ ಹೆಚ್ಚಿನ ಭಾಗವು ಬಿರುಕು ಬಿಟ್ಟಿದ್ದರಿಂದ ಭೂಕುಸಿತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಕೃಷಿ ಸಚಿವ ಜೆ.ಪಿ.ದಲಾಲ್ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ತಲುಪಿದ್ದಾರೆ.