ಶ್ರೀನಗರದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದು, ಮೂವರು ಅರೆಸೇನಾ ಪಡೆಯ ಪೊಲೀಸರು ಗಾಯಗೊಂಡಿದ್ದಾರೆ.
ಗುರುವಾರ ಮತ್ತು ಶುಕ್ರವಾರದ ಮಧ್ಯಂತರ ರಾತ್ರಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಅರೆಸೇನಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಪಂಥಾಚೌಕ್‌ನಲ್ಲಿ ಗುಂಡಿನ ಚಕಮಕಿ ನಡೆಸಿವೆ. ಈ ಸಂದರ್ಭದಲ್ಲಿ ಶಂಕಿತ ವ್ಯಕ್ತಿ ಮನೆಗೆ ಪ್ರವೇಶ ಮಾಡುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ, ಮೂವರು ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಗಾಯಗೊಂಡರು. ಸೇನೆ ಸರ್ಪಗಾವಲು ಬಿಗಿಗೊಳಿಸಿ ಪ್ರತಿದಾಳಿ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದೆ.
ಎನ್ ಕೌಂಟರ್ ಸ್ಥಳದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ. ಹತ್ಯೆಯಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಭಯೋತ್ಪಾದಕ ಸಂಘಟನೆ ಜೆಎಂನ ಸುಹೇಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ.
ದಕ್ಷಿಣ ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಗುಂಡಿನ ಚಕಮಕಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿ ಆರು ಉಗ್ರರನ್ನು ಹತ್ಯೆ ಮಾಡಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಿರ್ಹಾಮಾ ಗ್ರಾಮದಲ್ಲಿ ಮೂವರು ಉಗ್ರರು ಹತರಾಗಿದ್ದರೆ, ಅನಂತನಾಗ್ ನೌಗಾಮ್ ಗ್ರಾಮದಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಓರ್ವ ಯೋಧ ಸಾವನ್ನಪ್ಪಿದ್ದಾರೆ.