ಸೇವಾಭದ್ರತೆ, ಖಾಯಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಸಂಘಗಳ ನೇತೃತ್ವದಲ್ಲಿ ತುಮಕೂರಿನ ಅಮಾನಿಕೆರೆ ಗಾಜಿನಮನೆ ಹಿಂಭಾಗದಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದೆ.
ಕಳೆದ ನಾಲ್ಕು ದಿನಗಳಿಂದ ಬ್ಯಾಚ್ ವೈಸ್ ಧರಣಿ ಕುಳಿತು ಪ್ರತಿಭಟನೆ ಕೈಗೊಂಡಿರುವ ಅತಿಥಿ ಉಪನ್ಯಾಸಕರು ಸರ್ಕಾರದ ಕಣ್ಣು ತೆರೆಸುವ ಉದ್ದೇಶದಿಂದ ವಿಶಿಷ್ಠ ರೀತಿಯ ಪ್ರತಿಭಟನೆ ಮಾಡುತ್ತಿದ್ದಾರೆ. ಡಿಸೆಂಬರ್ 30ರಂದು ಧರಣಿ ಸ್ಥಳದಲ್ಲೇ ಅತಿಥಿ ಉಪನ್ಯಾಸಕರು ಗ್ಯಾಸ್ ಇಟ್ಟುಕೊಂಡು ಬೋಂಡಾ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ ಸಾರ್ವಜನಿಕರು ಮತ್ತು ಆಡಳಿತ ಯಂತ್ರದ ಗಮನ ಸೆಳೆಯುವ ಯತ್ನ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖರು ದೇಶದಲ್ಲಿ ಜನರು ಉದ್ಯೋಗದಲ್ಲಿ ತೊಡಗಿದ್ದಾರೆ ಎಂದಿದ್ದರು. ಅದಕ್ಕೆ ಬೋಂಡಾ ಮಾರಾಟ ಮಾಡುವವರನ್ನು ಉದಾಹರಣೆಯಾಗಿ ನೀಡಿದ್ದರು. ಹಾಗಾಗಿ ಅತಿಥಿ ಉಪನ್ಯಾಸಕರು ಧರಣಿ ಸ್ಥಳದಲ್ಲಿ ಬೋಂಡಾ ತಯಾರಿಸಿ ಮಾರಾಟ ಮಾಡಿದ್ದು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದಂತೆ ಇತ್ತು.
ಅತಿಥಿ ಉಪನ್ಯಾಸಕರಿಗೆ ವರ್ಷದಲ್ಲಿ ಆರು ತಿಂಗಳು ಮಾತ್ರ ಗೌರವ ಧನ ನೀಡುವ ಸರ್ಕಾರ ಇನ್ನುಳಿದ ಆರು ತಿಂಗಳು ಬಿಟ್ಟಿ ದುಡಿಸಿಕೊಳ್ಳುತ್ತಿದೆ. ಅತಿಥಿ ಉಪನ್ಯಾಸಕರಿಗೆ ಅವಮಾನ ಮಾಡಲಾಗುತ್ತಿದೆ. ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಗೌರವ ಧನ ನೀಡದೇ ಇರುವುದರಿಂದ ಪ್ರತಿ ಬಾರಿಯೂ ಸಾಲ ಮಾಡುತ್ತ ಜೀವನ ದೂಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸೇವಾಭದ್ರತೆ ಒದಗಿಸಬೇಕು. ಗೌರವ ಧನವನ್ನು ಹೆಚ್ಚಳ ಮಾಡಬೇಕು.ತಿಂಗಳು ತಿಂಗಳು ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಗಳು ಅತಿಥಿ ಉಪನ್ಯಾಸಕರ ಸಮಸ್ಯೆಗಳ ಅಧ್ಯಯನಕ್ಕೆ ಪದೇ ಪದೇ ಸಮಿತಿ ರಚನೆ ಮಾಡುವುದರಿಂದ ಪ್ರಯೋಜನ ಇಲ್ಲ. ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೂಕ್ತ ಹಣ ಮೀಸಲಿಡಬೇಕು. ಇದರ ಜೊತೆಗೆ ವಯೋಮಾನ ಮೀರಿರುವವರು ಸೇರಿದಂತೆ ಎಲ್ಲರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.


