ಅಭಿವೃದ್ಧಿ ಕೆಲಸಗಳನ್ನು ಕೈಬಿಟ್ಟು, ಆಡಳಿತ ಯಂತ್ರವನ್ನು ನಿಷ್ಕ್ರಿಯಗೊಳಿಸಿದ ಅಕ್ರಮ ಮತ್ತು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ಕಾಯುತ್ತಿದ್ದಾರೆ ಎಂಬುದನ್ನು ಚುನಾವಣಾ ಫಲಿತಾಂಶಗಳು ದೃಢಪಡಿಸಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜಿವಾಲಾ ಹೇಳಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿನ ಮತ ಹಂಚಿಕೆ ರಾಜ್ಯದಲ್ಲಿ ಬಿಜೆಪಿಯ ಜನಪ್ರಿಯತೆಯ ಭಾರೀ ಕುಸಿತ ಸೂಚಿಸುತ್ತದೆ. ಕಾಂಗ್ರೆಸ್ ಮತ ಹಂಚಿಕೆಯು ಶೇಕಡ 42.06ಕ್ಕೆ ಏರಿದ್ದು, ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ಶೇ.36.9 ಮತ್ತು 3.8ರಷ್ಟು ಮತ ಪಡೆದಿವೆ ಎಂದು ವಿಶ್ಲೇಷಿಸಿದರು.
ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 58 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ 500 ವಾರ್ಡ್‌ಗಳಲ್ಲಿ ಜಯ ಸಾಧಿಸಿದ್ದರೆ, ಆಡಳಿತಾರೂಢ ಬಿಜೆಪಿ 435 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ! ಜೆಡಿಎಸ್ 45 ವಾರ್ಡ್‌ಗಳಲ್ಲಿ ಮಾತ್ರ ಗೆದ್ದಿದೆ ಎಂದು ಹೇಳಿದ್ದಾರೆ.
ಕೇಂದ್ರ – ರಾಜ್ಯ ಬಿಜೆಪಿ ಆಡಳಿತದಲ್ಲಿ ದೇಶವು ಹಲವು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಬೆಲೆ ಏರಿಕೆ, ಆದಾಯ ಕುಸಿತ, ಉದ್ಯೋಗ ನಷ್ಟ, ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಜನರ ಹಿತದ ಬಗೆಗಿನ ಬಿಜೆಪಿ ಸರ್ಕಾರದ ನಿರಾಸಕ್ತಿ ಗಮನಿಸಿ ಉತ್ತರ ನೀಡುತ್ತಾರೆಂಬುದು ತಡವಾಗಿ ಬಂದ ಸತತ ಚುನಾವಣಾ ಫಲಿತಾಂಶಗಳು ಸ್ಪಷ್ಟವಾಗಿ ಸಾಬೀತುಪಡಿಸಿವೆ ಎಂದರು.
ಮತಾಂತರ ವಿರೋಧಿ ಕಾನೂನು, ದೇವಾಲಯ ನಿರ್ವಹಣೆಯಂತಹ ಜನರ ದಾರಿತಪ್ಪಿಸುವ ಬಿಜೆಪಿಯ ತಂತ್ರಗಳನ್ನು ಜನ ಗಂಭೀರವಾಗಿ ತೆಗೆದುಕೊಂಡಿಲ್ಲ. ವಿಭಜಕ ಶಕ್ತಿಗಳ ಪಿತೂರಿಗಳನ್ನು ಪ್ರಗತಿಪರ ಕನ್ನಡಿಗರು ಅರಿತಿದ್ದಾರೆ. ಅಸಮರ್ಥ ಮತ್ತು ಭ್ರಷ್ಟ ಬೊಮ್ಮಾಯಿ ಸರ್ಕಾರವು ಅಭಿವೃದ್ಧಿ ಮತ್ತು ಪ್ರಗತಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಸೇರಿ ಎಲ್ಲರ ಪರಿಶ್ರಮ ಮತ್ತು ಕಾರ್ಯದ ಏಕತೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುತ್ತದೆ. ನಂಬರ್ ಒನ್ ರಾಜ್ಯ ಮಾಡುವ ಹೊಸ ಯುಗ ಪ್ರಾರಂಭಿಸುತ್ತದೆ ಎಂದು ಭರವಸೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಆಶೀರ್ವಾದ ಮಾಡಿದ ಎಲ್ಲಾ ಕನ್ನಡಿಗ ಸಹೋದರ ಸಹೋದರಿಯರಿಗೆ ಕಾಂಗ್ರೆಸ್ಪ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತದೆ ಎಂದರು.


