ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ 27 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಸ್. ಕಲಾ ಅಪರಾಧಿಗೆ ಶಿಕ್ಷೆಯನ್ನು ಘೋಷಿಸಿದ ಕೂಡಲೇ ಅಪರಾಧಿ ಸುಜಿತ್ ಸಾಕೇತ್ ಆಕ್ರೋಶಗೊಂಡು ನ್ಯಾಯಾಧೀಶರ ಕಡೆಗೆ ತನ್ನ ಚಪ್ಪಲಿಯನ್ನು ಎಸೆದಿದ್ದು ಚಪ್ಪಲಿಗಳು ಗುರಿ ತಪ್ಪಿ ಸಾಕ್ಷಿ ಪೆಟ್ಟಿಗೆ ಬಳಿ ಬಿದ್ದಿವೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಪ್ರಾಸಿಕ್ಯೂಷನ್ ಪ್ರಕಾರ ಮಧ್ಯಪ್ರದೇಶ ಮೂಲದ ಅಪರಾಧಿ ಏಪ್ರಿಲ್ 30ರಂದು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಸಂತ್ರಸ್ತೆ ವಲಸೆ ಕಾರ್ಮಿಕನ ಪುತ್ರಿ ಎಂದು ಹೇಳಿದೆ.
ಬಾಲಕಿ ಒಬ್ಬಂಟಿಯಾಗಿರುವುದನ್ನು ಕಂಡ ಆರೋಪಿ ಸುಜಿತ್ ಸಾಕೇತ್, ಚಾಕೊಲೇಟ್ ಕೊಡಿಸುವ ನೆಪದಲ್ಲಿ ಬಾಲಕಿಯನ್ನು ಅಪಹರಿಸಿದ್ದಾನೆ. ನಂತರ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
ಹಜಿರಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಸೇರಿ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ನ್ಯಾಯಾಲಯ ಪ್ರಾಸಿಕ್ಯೂಷನ್ ಪರೀಕ್ಷಿಸಲ್ಪಟ್ಟ 26 ಸಾಕ್ಷಿಗಳ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಂಡು ಜೀವಾವಧಿ ಶಿಕ್ಷೆ ಘೋಷಣೆಗೂ ಮೊದಲು 53 ಸಾಕ್ಷ್ಯಚಿತ್ರಗಳನ್ನು ಪರಿಗಣಿಸಿತು.


